ಮಂಗಳೂರು: ಸೆ.2 ರಂದು ಮಂಗಳೂರಿಗೆ ಪ್ರಧಾನಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳ ಮೇಲೆ ನಮ್ಮ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಧಾನಿ ಕಾರ್ಯಕ್ರಮ ಗೊಂದಲಕ್ಕೆ ಯತ್ನ ಪಡಿಸಿದ ಮತ್ತು ಆಕ್ಷೇಪರ್ಹವಾಗಿ ಬರಹ ಹಾಗೂ ಫೋಟೋ ಮಾರ್ಫ್ ಮಾಡಿ ಹಂಚಿದ ಹಿನ್ನೆಲೆ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಜೊತೆಗೆ ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣಕ್ಕೆ ಪ್ರತ್ಯೇಕ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿದ್ದಾರೆಂಬ ಮಾಹಿತಿ ಇದೆ. ಇದನ್ನೂ ಸಹ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿ ಆಕ್ಷೇಪಾರ್ಹ ಬರಹಗಳು ಮತ್ತು ಫೋಟೋಗಳನ್ನು ಹರಿಯಬಿಟ್ಟಿದ್ದು ಅಪರಾಧ ಎಂದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸದ್ಯ ದಾಖಲಾದ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದ್ದೇವೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು.

























