ಬಂಟ್ವಾಳ: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಮಂಡಲ ಪಂಚಾಯತ್ ಸದಸ್ಯ, ಮಾಣಿ ಗ್ರಾಮ ಪಂಚಾಯತ್ ನ ಪ್ರಸ್ತುತ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ರವರ ತಂದೆ ಕೊಡಾಜೆ ನಿವಾಸಿಯಾಗಿರುವ ಬಾಬು ಆಳ್ವ(84) ರವರು ಸೆ.5 ರಂದು ರಾತ್ರಿ ನಿಧನರಾದರು.
ಕೃಷಿ ಪ್ರಧಾನ ಕುಟುಂಬದವರಾದ ಬಾಬು ಆಳ್ವ ರವರು ಸ್ವಸಾಮರ್ಥ್ಯದಿಂದ ಕೃಷಿಯನ್ನು ಅಭಿವೃದ್ಧಿಪಡಿಸಿದ್ದು, ಆ ಮೂಲಕ ಯಶಸ್ಸನ್ನು ಕೂಡಾ ಕಂಡಿದ್ದರು.
ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಗ್ರಾಮ ದೈವಗಳಾದ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸೇವಾಕಾರ್ಯಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು.
ತನ್ನ ಕುಟುಂಬ ಜಿಲ್ಲೆಯ ಪ್ರಸಿದ್ಧ ಪಡ್ಯಾರಮನೆ ಮನೆತನದ ಯಜಮಾನನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮಂಡಲ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಸದಸ್ಯರಾಗಿ, ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿ, ವಿದ್ಯಾಭಿವರ್ಧಕ ಸಂಘದ ನಿರ್ದೇಶಕರಾಗಿ, ಸರಕಾರಿ ಪ್ರಾಥಮಿಕ ಶಾಲೆಯ ಸಮಿತಿಯ ಅಧ್ಯಕ್ಷರಾಗಿ, ಯಕ್ಷಗಾನ ಸಮಿತಿಯ ಅಧ್ಯಕ್ಷರಾಗಿ ಒಟ್ಟಿನಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ರಾಜಕೀಯ ಪಕ್ಷವಾದ ಕಾಂಗ್ರೆಸ್ಸಿನ ಗ್ರಾಮ ಮಟ್ಟದ ನಾಯಕತ್ವವನ್ನೂ ವಹಿಸಿದ್ದರು. ಸ್ಥಳೀಯ ಕೂಟಗಳಲ್ಲಿ ಯಕ್ಷಗಾನ ಅರ್ಥದಾರಿಯಾಗಿ, ವೇಶದಾರಿಯಾಗಿಯೂ ಯಶಸ್ಸನ್ನು ಕಂಡಿದ್ದರು.
ಮೃತರು ಮೂರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.