ಕನ್ನಡದ ಹೆಸರಾಂತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಬಂಧನಕ್ಕಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ.
ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ ವಿಶ್ವ ವಿದ್ಯಾಲಯ ಮಾರಿಸಲು ಸ್ವರ್ಣಲತಾ ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಮಧುಕರ್ ಅಂಗೂರ್ ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದ್ದು, ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆ.10 ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ.
ಈ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ವಿವಿ ರಿಜಿಸ್ಟಾರ್ ಡಾ. ನಿವೇದಿತಾ ಮಿಶ್ರಾ ‘ಸೆ.10 ರಂದು ಸ್ವರ್ಣಲತಾ ಮತ್ತು ಮಧುಕರ್ ಅಂಗೂರು ಜೊತೆಯಾಗಿ ಗೂಂಡಾಗಳ ಜೊತೆ ವಿವಿಗೆ ನುಗ್ಗಿದ್ದಾರೆ. ಗೂಂಡಾಗಳ ಬಳಿ ಬಂದೂಕು ಕೂಡ ಇದ್ದವು. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಸ್ವರ್ಣಲತಾ ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
