ಮಂಗಳೂರು: ಮೂಡಬಿದಿರೆಯಲ್ಲಿ ಆ.30 ರಂದು ಮಹಿಳೆ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಬಿದ್ರಿಯ ಬಡಗ ಮಿಜಾರ್ ಗ್ರಾಮದ ನಿವಾಸಿ ದಿನೇಶ್ ಪೂಜಾರಿ (36), ಬೆಳ್ತಂಗಡಿ ತಾಲೂಕಿನ ಉಳ್ಳಗುಡ್ಡೆ ಹೊಸಮನೆ ನಿವಾಸಿ ಸುಕೇಶ್ ಪೂಜಾರಿ (32), ಮೂಡಬಿದ್ರಿಯ ನಿರ್ಪಣ ದಡ್ಕೆ ನಿವಾಸಿ ಹರೀಶ್ ಪೂಜಾರಿ (34) ಬಂಧಿತ ಆರೋಪಿಗಳು.

ಆಗಸ್ಟ್ 30, ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಮೂವರು ಮೂಡಬಿದ್ರಿಯ ಅಶ್ವಥಪುರದ ಬೇರಿಂಜೆ ಗುಡ್ಡೆ ನಿವಾಸಿ ಕಮಲಾ ಎಂಬ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದರು. ಕಮಲಾ ಅವರ ಮೇಲೆ ಮಚ್ಚಿನಿಂದ ದೈಹಿಕ ಹಲ್ಲೆ ನಡೆಸಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಕುರಿತು ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಲು ಆರೋಪಿಗಳು ಮಂಗಳೂರಿಗೆ ತೆರಳುತ್ತಿದ್ದಾಗ, ಕುಲಶೇಖರ್ ಚರ್ಚ್ ಗೇಟ್ ಬಳಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸುಮಾರು 4.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ ಆಭರಣಗಳು, ಎರಡು ಸ್ಕೂಟರ್‌ಗಳು, ಮೂರು ಮೊಬೈಲ್‌ಗಳನ್ನು, ಒಂದು ಮಚ್ಚು, ಎರಡು ಮಂಕಿ ಕ್ಯಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
