ವಿಟ್ಲ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ಅಜಾಗರೂಕತೆಯಿಂದ ಬಸ್ ಅನ್ನು ಚಲಾಯಿಸಿದ ಕಾರಣದಿಂದಾಗಿ ಬಸ್ ಪ್ರಯಾಣಿಕರೋರ್ವರು ಬಸ್ ನಿಂದ ಬಿದ್ದು ತೀವ್ರ ಗಾಯಗೊಂಡಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಪೆರುವಾಯಿ ಕೆದುವಾರು ನಿವಾಸಿ ಇನಾಸ್ ಡಿ’ಸೋಜಾ ಗಾಯಗೊಂಡವರು.
ಸೆ.15 ರಂದು ಇನಾಸ್ ಡಿ’ಸೋಜಾ ರವರು ವಿಟ್ಲದಿಂದ ಪಕಳಕುಂಜಕ್ಕೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸಂಚಾರಿಸಿದ್ದು, ಈ ವೇಳೆ ಅವರು ಇಳಿಯಬೇಕಾದ ಪೆರುವಾಯಿ ಕೆದುವಾರು ಎಂಬಲ್ಲಿಗೆ ತಲುಪಿದಾಗ ಬಸ್ ಚಾಲಕನು ತಿರುವು ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ಬಸ್ ಚಲಾಯಿಸಿದ ಪರಿಣಾಮ ಇನಾಸ್ ಡಿ’ಸೋಜಾ ರವರು ಬಸ್ಸಿನ ಹಿಂಬದಿಯ ಬಾಗಿಲಿನಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಘಟನೆಗೆ ಕಾರಣವಾದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಇನಾಸ್ ಡಿ’ಸೋಜಾ ರವರ ಪುತ್ರಿ ದೂರು ನೀಡಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 145/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.