ಪುತ್ತೂರು: ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನವನ್ನು ಶಾಲೆಯಲ್ಲಿ ಬಿಚ್ಚುವಂತೆ ಹೇಳಿದ ಘಟನೆ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರು, ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಮಕ್ಕಳ ಪೋಷಕರು ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿ ಮತ್ತೆ ಮಕ್ಕಳ ಕೈಗೆ ರಕ್ಷಾಬಂಧನವನ್ನು ಕಟ್ಟಿಸಿದ್ದು, ಪ್ರಕರಣವು ಸುಖಾಂತ್ಯ ಕಂಡಿದೆ.
ಪಾಪೆಮಜಲು ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಬಿಚ್ಚುವಂತೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಿಳಿಸಿದ್ದು, ಈ ಬಗ್ಗೆ ಅರಿತ ಮಕ್ಕಳ ಪೋಷಕರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ಮತ್ತು ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅದನ್ನು ಬಿಚ್ಚುವಂತೆ ಹೇಳಿದ್ದೆ ಹೊರತು ಬೇರೆ ಯಾವ ವಿಧದಿಂದಲೂ ಅಲ್ಲ, ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನವು ತುಂಬಾ ಕಪ್ಪಾಗಿದ್ದು, ಈ ಹಿನ್ನೆಲೆ ಮಕ್ಕಳ ಆರೋಗ್ಯ ಕಾಳಜಿಯಿಂದಾಗಿ ಅದನ್ನು ಬಿಚ್ಚಿಡುವಂತೆ ಹೇಳಿದ್ದಾಗಿ ಹೇಳಿದರು.
ಈ ವೇಳೆ ಮಾತನಾಡಿ ಮಕ್ಕಳ ಪೋಷಕರು, ರಕ್ಷಾಬಂಧನವನ್ನು ರಕ್ಷಣೆಯ ಸಂಕೇತವಾಗಿ ಕಟ್ಟಲಾಗುವುದೇ ಹೊರತು ಬೇರೆ ವಿಚಾರದಿಂದಲ್ಲ, ಅದೇ ರೀತಿ ಈ ವರ್ಷ ಕಟ್ಟಿದ ರಕ್ಷಾಬಂಧನವನ್ನು ಮುಂದಿನ ವರ್ಷದಲ್ಲಿಯೇ ಬಿಚ್ಚುವುದಲ್ಲದೆ ಮಧ್ಯೆ ಎಲ್ಲಿಯೂ ಬಿಚ್ಚಲಾಗುವುದಿಲ್ಲ ಎಂದು ರಕ್ಷಾಬಂಧನದ ಬಗೆಗಿನ ಮಹತ್ವವನ್ನು ತಿಳಿಸಿದರು.
ನಂತರ ಪೋಷಕರ ಬಳಿಯಲ್ಲಿದ್ದ ರಕ್ಷಾಬಂಧನವನ್ನು ಶಾಲಾ ಮುಖ್ಯೋಪಾಧ್ಯಾಯರು ತೆಗೆದುಕೊಂಡು ಮಕ್ಕಳಿಗೆ ಕಟ್ಟಿದರು. ಈ ಮೂಲಕ ಶಾಲೆಯಲ್ಲಿ ರಕ್ಷಾಬಂಧನವನ್ನು ಬಿಚ್ಚಿಸಿದ ಗೊಂದಲದ ವಿಚಾರಕ್ಕೆ ತೆರೆ ಎಳೆಯಲಾಯಿತು.. ಹಾಗೆಯೇ ಈ ವಿಚಾರವನ್ನು ಇಲ್ಲಿಯೇ ಬಿಡುವುದಾಗಿ ಪೋಷಕರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ಪೆರಿಗೇರಿ, ನಾರಾಯಣ್ ಚಾಕೋಟೆ, ಬಾಲಕೃಷ್ಣ ಕಾವು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಾಪೆಮಜಲು ಶಾಲಾ ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ರವರು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಪ್ರಶಸ್ತಿ ವಿತರಣಾ ವಿಚಾರದಲ್ಲಿಯೂ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು.