ಮಂಗಳೂರು: ಮೂಡಬಿದಿರೆ ಮೂಲದ ಆ್ಯಂಬುಲೆನ್ಸ್ ಚಾಲಕ ಅನಿಲ್ ರೂಬನ್ ತಾವು ಮಾಡಿದ ಮಾನವೀಯ ಸೇವೆಗೆ ಗ್ರೇಟ್ ಎನಿಸಿಕೊಂಡಿದ್ದಾರೆ. ಮೂಡಬಿದ್ರೆಯಿಂದ ದೂರದ ಉತ್ತರ ಪ್ರದೇಶಕ್ಕೆ ಕೇವಲ 40 ಗಂಟೆಗಳಲ್ಲಿ 2700 ಕಿ.ಮೀ ಕ್ರಮಿಸಿ, ರೋಗಿಯನ್ನ ಸುರಕ್ಷಿತವಾಗಿ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.
ಏನಿದು ಸಾಹಸ..!!??
ಉತ್ತರ ಪ್ರದೇಶದ ಮುರಾದಾಬಾದ್ ನಿವಾಸಿ ಮಹಾಂದಿ ಹಸನ್, ಮೂಡಬಿದ್ರೆಯ ಮಾಸ್ತಿಕಟ್ಟೆಯ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಹಸನ್, ಆಕಸ್ಮಿಕವಾಗಿ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು.
ಹೀಗಾಗಿ ಅವರನ್ನ ಮುರಾದಾಬಾದ್‌ಗೆ ಕರೆಸಿಕೊಳ್ಳಲು ಕುಟುಂಬಸ್ಥರು ಬಯಸಿದ್ದರು. ಕುಟುಂಬಸ್ಥರ ಕೋರಿಕೆಯ ಮೇರೆಗೆ ಗೋದಾಮಿನ ಮಾಲೀಕರು ವಿಮಾನದ ಮೂಲಕ ಸಾಗಿಸಲು ವ್ಯವಸ್ಥೆ ಮಾಡಿದ್ದರು. ಆದರೆ ವೈದ್ಯರು ಅಥವಾ ದಾದಿಯರಿಲ್ಲದ ಕಾರಣ ಅಸ್ವಸ್ಥ ಕಾರ್ಮಿಕನನ್ನು ಕೊಂಡೊಯ್ಯಲು ವಿಮಾನ ಸಂಸ್ಥೆ ನಿರಾಕರಿಸಿದೆ.
ವಿಮಾನ ಸಂಸ್ಥೆ ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುರಾದಾಬಾದ್ ಗೆ ಹಸನ್ ಅವರನ್ನ ಆಂಬ್ಯುಲೆನ್ಸ್ ಮೂಲಕ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಮೂಡಬಿದ್ರೆ ಅನಿಲ್ ರೂಬನ್ ಮೆಂಡೋನ್ಸ್ ಮಾಲಿಕತ್ವದ ಆಂಬ್ಯುಲೆನ್ಸ್ ಉತ್ತರ ಪ್ರದೇಶಕ್ಕೆ ಹೋಗಲು ಒಪ್ಪಿಕೊಂಡಿದೆ. ಅನಿಲ್ ರೂಬನ್ ತಮ್ಮ ಇನ್ನೊಬ್ಬ ಚಾಲಕನ ಜೊತೆ ಉತ್ತರ ಪ್ರದೇಶಕ್ಕೆ ಹೋಗಲು ನಿರ್ಧರಿಸುತ್ತಾರೆ.
ಅದರಂತೆ ಸೆಪ್ಟೆಂಬರ್ 10 ರಂದು ಹಸನ್ ಅವರನ್ನ ಆ್ಯಂಬುಲೆನ್ಸ್‌ನಲ್ಲಿ ಇಟ್ಟುಕೊಂಡು ಮೂಡಬಿದ್ರೆಯಿಂದ ಉತ್ತರ ಪ್ರದೇಶಕ್ಕೆ ಹೊರಡುತ್ತಾರೆ. ಸೆಪ್ಟೆಂಬರ್ 12ರ ಮುಂಜಾನೆ 10:30ರ ಸುಮಾರಿಗೆ ಆ್ಯಂಬುಲೆನ್ಸ್ ಮುರಾದಾಬಾದ್ ತಲುಪುತ್ತದೆ. ನಂತರ ಕುಟುಂಬಸ್ಥರು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಅನಿಲ್ ರೂಬನ್ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..