ಉಪ್ಪಿನಂಗಡಿ: ಜಿಂಕೆಯೊಂದು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿ ಎಂಬಲ್ಲಿ ನಡೆದಿದೆ.
ಮೃತ ಜಿಂಕೆ ಸುಮಾರು 3 ವರ್ಷ ಪ್ರಾಯದ ಗಂಡು ಜಿಂಕೆಯಾಗಿತ್ತೆಂದು ಅಂದಾಜಿಸಲಾಗಿದೆ.
ಕಕ್ಕಿಂಜೆಯ ಸಿದ್ದಿಕ್ ಎಂಬವರು ಉಪ್ಪಿನಂಗಡಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ದಿಢೀರನೆ ರಸ್ತೆ ದಾಟಲು ಜಿಗಿದ ಜಿಂಕೆ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಅರಣ್ಯ ಉಪ ವಿಭಾಗದ ಎ.ಸಿ.ಎಫ್. ಕಾರ್ಯಪ್ಪ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪ ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ವಿನಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ಜಿಂಕೆ ಶವವನ್ನು ವಶಕ್ಕೆ ಪಡೆದು ಇಲಾಖಾ ವಿಧಿ ವಿಧಾನ ನಡೆಸಿ ಮಣ್ಣಗುಂಡಿ ಕಾಡಿನಲ್ಲಿ ಅಂತಿಮವಿಧಿಯನ್ನು ನೆರವೇರಿಸಿದ್ದಾರೆ.