ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ ) ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್ ನೀಡಿದ್ದು, ಕೇವಲ ಐದು ತಿಂಗಳ ಅಂತರದಲ್ಲಿ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪರಿಷ್ಕೃತ ಇಂಧನ ಹೊಂದಾಣಿಕೆ ಶುಲ್ಕದ (ಎಫ್‌ಎಸಿ) ಕಾರಣ ನೀಡಿ ಅಕ್ಟೋಬರ್ 1ರಿಂದ 2023ರ ಮಾರ್ಚ್ 31ರವರೆಗೆ ಅನ್ವಯ ವಾಗುವಂತೆ (6 ತಿಂಗಳ ಅವಧಿಗೆ) ಕೆಇಆರ್‌ಸಿ ಆದೇಶ ಹೊರಡಿಸಿದೆ.
ಕೆಇಆರ್‌ಸಿ ಆದೇಶದ ಪ್ರಕಾರ ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ಹೆಚ್ಚಿಸಿದೆ . ಮೆಸ್ಕಾಂ ಎಫ್‌ಎಸಿ ಶುಲ್ಕವು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಮತ್ತು ಹೆಸ್ಕಾಂ ಎಫ್‌ಎಸಿ ಶುಲ್ಕವು ಹುಕ್ಕೇರಿ ಆರ್‌ಇಸಿಎಸ್ ಮತ್ತು ಏಕಸ್ ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದೇ ವರ್ಷದ ಜುಲೈ ತಿಂಗಳಿನಲ್ಲಿ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಿಸಲಾಗಿತ್ತು. ಮೆಸ್ಕಾಂ ವ್ಯಾಪ್ತಿಯಲ್ಲಿ 21 ಪೈಸೆ, ಸೆಸ್ಕ್ 19 ಪೈಸೆ, ಹೆಸ್ಕಾಂ 27 ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ 26 ಪೈಸೆಗಳಷ್ಟು ಹೆಚ್ಚಿಸಲಾಗಿತ್ತು. ಕೇಂದ್ರ ವಿದ್ಯುತ್ ಉತ್ಪಾದನಾ ಕೇಂದ್ರ (ಸಿಜಿಎಸ್), ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮತ್ತು ಉಡುಪಿಯ ಶಾಖೋತ್ಪನ್ನ ವಿದ್ಯುತ್ ಘಟಕದ (ಯುಪಿಸಿಎಲ್) ಮೂಲಕ ಎಲ್ಲ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ. ಕಲ್ಲಿದ್ದಲು ದರ ಗಣನೀಯವಾಗಿ ಏರಿದ್ದರಿಂದ ಎಫ್ಎಸಿ ಹೆಚ್ಚಿಸಲಾಗಿದೆ. ಹೀಗಾಗಿ ವೆಚ್ಚವು ಯೂನಿಟ್‌ಗೆ 48ರಿಂದ 86 ಪೈಸೆಯಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.