ಮಂಗಳೂರು: ಕಾಲೇಜು ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದ ಮೂವರು ಖಾಸಗಿ ಕಾಲೇಜು ವಿದ್ಯಾರ್ಥಿನಿಯರು ಸೆ.23ರಂದು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಮಿಷನರ್, ಚಿತ್ರದುರ್ಗದ ಒಬ್ಬರು ಮತ್ತು ಬೆಂಗಳೂರಿನ ಇಬ್ಬರು ಮೂವರು ಹುಡುಗಿಯರು ಸೆಪ್ಟೆಂಬರ್ 21 ರಂದು ತಮ್ಮ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು ಸಿಸಿಟಿವಿ ಫೂಟೇಜ್ನಲ್ಲಿ ಮೂವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಇನ್ನು ಕಾಲೇಜು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಾಧಾನಗೊಂಡಿದ್ದ ಈ ಮೂವರು ವಿದ್ಯಾರ್ಥಿನಿಯರು ಕಳೆದ ಬುಧವಾರ ಬೆಳಗ್ಗಿನ ಹೊತ್ತು ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದರು. ಅವರು ಹಾಸ್ಟೆಲ್ನಿಂದ ಹೊರಟು ಮಂಗಳೂರು ರೈಲ್ವೇ ಸ್ಟೇಷನ್ವರೆಗೆ ತೆರಳಿದ್ದ ಮಾಹಿತಿ ಲಭ್ಯವಾಗಿದ್ದು, ಅದರಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಜತೆ ಮಾತುಕತೆ ನಡೆಸಿ ಪೊಲೀಸ್ ಅಧಿಕಾರಿಗಳು ಮಕ್ಕಳ ಹುಡುಕಾಟ ನಡೆಸಿದ್ದು, ಇದೀಗ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ.
ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವಂತೆ ನಾನು ಶಿಕ್ಷಕರು ಮತ್ತು ಪೋಷಕರಲ್ಲಿ ಕೇಳಿಕೊಳ್ಳುತ್ತೇನೆ. 3 ತಿಂಗಳಿಗಿಂತ ಹೆಚ್ಚು ಕಾಲ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಪೋಷಕರಿಗೆ ಅನುಮತಿ ನೀಡದ ಕೆಲವು ಸಂಸ್ಥೆ ಇದೆ. ಹಾಗಾಗಿ ಅಂತಹ ಸಂಸ್ಥೆಗಳು ಪೋಷಕರು ತಮ್ಮ ಮಕ್ಕಳನ್ನು ತಿಂಗಳಿಗೊಮ್ಮೆ ಭೇಟಿಯಾಗಲು ಅನುಮತಿ ನೀಡಬೇಕು ಎಂದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.