ಪುತ್ತೂರು: ಶತಮಾನೋತ್ಸವ ಪೂರೈಸಿದ ದ. ಕ. ಜಿ. ಪ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಸ್ತುತ ಆಡಳಿತವಿರುವ ಶಾಲಾಭಿವೃದ್ಧಿ ಸಮಿತಿ ಊರಿನವರ, ದಾನಿಗಳ, ಹಳೆವಿದ್ಯಾರ್ಥಿಗಳ ಗಮನಕ್ಕೆ ತರದೆ ದತ್ತು ಸ್ವೀಕಾರ ಯೋಜನೆಯಲ್ಲಿ ಬೇರೆಯವರಿಗೆ ನೀಡಿದೆ ಎಂದು ಆರೋಪಿಸಿ ಹಿರಿಯ ವಿದ್ಯಾರ್ಥಿ ಸಂಘ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನರಿಮೊಗರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು 100 ವರ್ಷಗಳನ್ನು ಪೂರೈಸಿದ್ದು, ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಅನೇಕ ದಾನಿಗಳ, ಪೋಷಕರ, ಶಾಲಾ ಹಿತೈಷಿಗಳ ಸಹಕಾರದಿಂದ ಶಾಲೆಯು ಅತ್ಯುತ್ತಮವಾಗಿ ಬೆಳೆದು ಬಂದಿರುತ್ತದೆ. ಆದರೇ ಪ್ರಸ್ತುತ ಆಡಳಿತವಿರುವ ಶಾಲಾ ಅಭಿವೃದ್ಧಿ ಸಮಿತಿಯು ಈ ಶಾಲೆಯನ್ನು ಊರಿನವರ, ದಾನಿಗಳ, ಹಳೆ ವಿದ್ಯಾರ್ಥಿಗಳ ಗಮನಕ್ಕೆ ತರದೆ ಸರ್ವಾಧಿಕಾರಿ ಧೋರಣೆಯ ನಿಲುವನ್ನು ಕೈಗೊಂಡು, ದತ್ತು ಸ್ವೀಕಾರ ಯೋಜನೆಯಲ್ಲಿ ಶಾಲೆಯನ್ನು ಬೇರೆಯವರಿಗೆ ನೀಡಲು ಯೋಚಿಸಿದ್ದು ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಲಾಖಾ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಸಮಿತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.. ಸರಕಾರಿ ಧೋರಣೆ ಮತ್ತು ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ದತ್ತು ಸ್ವೀಕಾರದಡಿಯಲ್ಲಿ ಶಾಲೆಯನ್ನು ದತ್ತು ನೀಡಲು ಹೊರಟ ಶಾಲಾಭಿವೃದ್ಧಿ ಸಮಿತಿಯ ವಿರುದ್ಧ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧದ ನಡುವೆಯೂ ಶಾಲೆಯನ್ನು ದತ್ತು ಸ್ವೀಕಾರ ಯೋಜನೆಯಲ್ಲಿ ಬೇರೆಯವರಿಗೆ ನೀಡಿದ್ದಲ್ಲಿ, ನಡೆಯುವ ಎಲ್ಲಾ ಬೆಳವಣಿಗೆಗೆ ಇಲಾಖೆ ಮತ್ತು ಶಾಲಾಭಿವೃದ್ಧಿ ಸಮಿತಿಯೇ ಹೊಣೆ ಎಂದು ದೂರಿನಲ್ಲಿ ತಿಳಿಸಿದ್ದಾರೆ