ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೆ ಮಂಗಳೂರು ಪೊಲೀಸರ ತಂಡ ಮತ್ತೆ ಕಾರ್ಯಾಚರಣೆಗಿಳಿದಿದೆ. ಪಿಎಫ್ಐ ಮುಖಂಡರು, ಎಸ್ ಡಿಪಿಐ ಕಚೇರಿ ಮೇಲೆ ಮಂಗಳೂರು ಪೊಲೀಸರ ತಂಡ ದಾಳಿ ಮಾಡಿದ್ದು, ಕಚೇರಿಗಳಿಗೆ ಬೀಗ ಜಡಿದಿದೆ.
ಮಂಗಳೂರು ಪೊಲೀಸರ ತಂಡ ಕಳೆದ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದೆ. ಕಂದಾಯ ಮತ್ತು ಇತರ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಪಿಎಫ್ಐ ಮುಖಂಡರ ಮನೆಗಳು ಸೇರಿದಂತೆ ಎಸ್ಡಿಪಿಐ ಕಚೇರಿಯಲ್ಲಿ ಪೊಲೀಸರು ಶೋಧ ನಡೆಸಿದ ಬಳಿಕ ಸೀಝ್ ಮಾಡಲಾಗಿದೆ.
ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆಯಲ್ಲಿದ್ದ ಪಿಎಫ್ಐ ಕಚೇರಿ, ಬಂದರು ಅಜೀಜುದ್ದೀನ್ ರಸ್ತೆಯಲ್ಲಿರುವ ಸಿಎಫ್ಐ ಕಚೇರಿಗೆ ಬೀಗಮುದ್ರೆ ಹಾಕಲಾಯಿತು. ಪಿಎಫ್ಐ ಕಚೇರಿಗೆ ಪೊಲೀಸರು ತೆರಳಿದಾಗ ಪ್ರವೇಶದ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿತ್ತು. ಒಳಗಡೆ ಸಂಘಟನೆಗಳ ಕಾರ್ಯಕರ್ತರು ಇರಲಿಲ್ಲ. ಕಟ್ಟರ್ ಸಹಾಯದಿಂದ ಬೀಗ ಮುರಿದು ಒಳಪ್ರವೇಶಿಸಿದ ಪೊಲೀಸರು, ಸರಕಾರಿ ಪಂಚರ ಸಮಕ್ಷಮದಲ್ಲಿ ಒಳಗಿದ್ದ ದಾಖಲೆ ಪತ್ರಗಳು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿ ಕಚೇರಿ ಬಾಗಿಲಿಗೆ ಬೀಗ ಹಾಕಿದರು. ಸರಕಾರದ ಆದೇಶದಂತೆ ನಿಷೇಧಿತ ಸಂಘಟನೆಗಳಿಗೆ ಸೇರಿದ ಕಚೇರಿಗಳಲ್ಲಿ ತಪಾಸಣೆ ನಡೆಸಿ ಬೀಗ ಮುದ್ರೆ ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
