ಪುತ್ತೂರು: ವಿವಾದಕ್ಕೆ ಕಾರಣವಾಗಿದ್ದ ದಾರಂದಕುಕ್ಕು ಬಸ್ ತಂಗುದಾಣ ಕೊನೆಗೂ ಉದ್ಘಾಟನೆಗೊಂಡಿತು. ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ಬಸ್ ತಂಗುದಾಣ ನಿರ್ಮಾಣವಾಗಿದ್ದು, ಅ.5 ರಂದು ಸಂಜೆ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ವೀರ ಮಾರುತಿ ಫ್ರೆಂಡ್ಸ್ ದಾರಂದಕುಕ್ಕು ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಜಯದಶಮಿಯ ದಿನದಂದೇ ಬಸ್ ನಿಲ್ದಾಣದ ಉದ್ಘಾಟನೆಯಾಗುತ್ತಿದ್ದು, ದಾರಂದಕುಕ್ಕುನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡಿದವರನ್ನು ಮೆಟ್ಟಿನಿಂತು ಮತ್ತೆ ಕಟ್ಟುವೆವು ಸಂದೇಶ ನೀಡಿದ ದಿನವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಂದಾಗಿರುವ ಪತ್ರಿಕಾ ರಂಗವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಈ ಬಸ್ ನಿಲ್ದಾಣವೇ ಉದಾಹರಣೆ. ತನ್ನ ಸ್ವಾರ್ಥಕ್ಕಾಗಿ ಬಸ್ ನಿಲ್ದಾಣದ ಕಾಮಗಾರಿಗೆ ಅಡೆ ತಡೆಯುಂಟು ಮಾಡಿದ್ದಾರೆ. ಆದರೆ ಇಲ್ಲಿ ಒಬ್ಬ ದುಷ್ಟನನ್ನು ನಿಗ್ರಹ ಮಾಡಲು ಸಾವಿರ ಜನ ಒಟ್ಟು ಸೇರಿದ್ದು ದುಷ್ಟ ಕೆಲಸಕ್ಕೆ ಯಾರೂ ಇಳಿಯಬಾರದು ಎಂದು ಸ್ಪಷ್ಟ ಸಂದೇಶ ಇಲ್ಲಿನ ಜನತೆ ನೀಡಿದ್ದಾರೆ ಎಂದರು.

ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಮಾತನಾಡಿ, ಸ್ಥಳದ ಹೆಸರಿನಂತೆ ಹೆಬ್ಬಾಗಿಲ ಮಧ್ಯೆ ನಿಂತು ದುಷ್ಟರನ್ನು ಮೆಟ್ಟಿ ವಿಜಯದಶಮಿಯ ಸಂಭ್ರಮಾಚರಣೆ ನಡೆಸಲಾಗಿದೆ. ಇಲ್ಲಿನ ದುಷ್ಟ ಶಕ್ತಿಗಳ ಸಂಹಾರ ಆಗಿದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಗೌಡ, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ, ಪೂಡಾದ ಅಧ್ಯಕ್ಷ ಅಶೋಕ್ ಶೆಣೈ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಸುಭಾಸ್ಚಂದ್ರ ರೈ ಕುಂಬ್ರುಗಗುತ್ತು, ಕಾಯರ್ತೋಡಿ ಅಜಿತ್ ಪ್ರಸಾದ್ ರೈ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಬು ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸಿ, ನೇತೃತ್ವ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಹಾಗೂ ಗುತ್ತಿಗೆದಾರ ಅತುಲ್ ರೈ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುಮಂಗಳಾ ಶೆಣೈ ಪ್ರಾರ್ಥಿಸಿ, ಚಿದಾನಂದ ಸ್ವಾಗತಿಸಿದರು. ನಾಗೇಶ್ ಟಿ.ಎಸ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು.
ತಿಮ್ಮಪ್ಪ ಗೌಡ ಪುಳುವಾರು, ರಮಣಿ ಡಿ ಗಾಣಿಗ, ಕೇಶವ ಗೌಡ ಕೊಲ್ಯ, ಪ್ರಕಾಶ್ ಪಂಜಿಗ, ರಾಘವೇಂದ್ರ ಅಂದ್ರಟ್ಟ, ತಿಮ್ಮಪ್ಪ ಎಂ, ಜಯಾನಂದ, ಜಗದೀಶ್ ಬೀರಿಗ, ಪ್ರಶಾಂತ್ ಕೆಮ್ಮಾಯಿ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಪ್ರಶಾಂತ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಹುಲಿ ಕುಣಿತ ಪ್ರದರ್ಶನ ನಡೆಯಿತು.


























