ಪುತ್ತೂರು: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಮಾರು ವರುಷಗಳಿಂದ ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಮಹಿಳೆಗೆ ಮನೆ ನಿರ್ಮಾಣ ಮಾಡಿ ಕೊಡಲು ವೀರಸಾವರ್ಕರ್ ರವರ ಜೀವನದಿಂದ ಪ್ರಭಾವಿತರಾದ ‘ಅಭಿನವ ಭಾರತ ಮಿತ್ರಮಂಡಳಿ’ಯವರು ಮುಂದಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಮನೆ ನಿರ್ಮಾಣದ ಬಗ್ಗೆ ವಿವರಗಳನ್ನು ಕಲೆ ಹಾಕಿದರು.

ಕೆಯ್ಯೂರು ಮಾಡಾವು ಪತ್ಯರ್ಡ್ಕ ನಿವಾಸಿ ದಿ. ವಸಂತ ಎಂಬವರ ಪತ್ನಿ ಸುಮಾವತಿ (38) ಎಂಬವರು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಗಡು ಶೀಟ್ ಹಾಕಿದ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿರುವ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದು, ಮನೆಯಿಲ್ಲದೆ ತೀರಾ ಸಂಕಷ್ಟ ಪಡುವಂತಾಗಿದೆ. ಈ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ‘ಅಭಿನವ ಭಾರತ ಮಿತ್ರಮಂಡಳಿ’ಯವರು ಮಹಿಳೆಗೆ ಮನೆ ನಿರ್ಮಾಣ ಮಾಡಿ ಕೊಡಲು ಮುಂದಾಗಿದ್ದು, ಸರ್ಕಾರದಿಂದ ಬರುವ ಅನುದಾನ ಬಳಸಿ ಮನೆ ಕಟ್ಟಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ನೂತನ ಮನೆ ನಿರ್ಮಾಣಕ್ಕೆ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಪಿಜಿ ಜಗನ್ನಿವಾಸ್ ರಾವ್ ರವರು ವಾಸ್ತುತಜ್ಞರಾಗಿದ್ದು, ‘ಅಭಿನವ ಭಾರತ ಮಿತ್ರಮಂಡಳಿ’ಯ ದಿನೇಶ್ ಕುಮಾರ್ ಜೈನ್, ಧನ್ಯಕುಮಾರ್ ಬೆಳಂದೂರು, ಸ್ಥಳೀಯ ಪಂಚಾಯತ್ ಸದಸ್ಯೆ ಮೀನಾಕ್ಷಿ ಹಾಗೂ ಮತ್ತಿತರರು ಭೇಟಿ ನೀಡಿದರು.




























