ಪುತ್ತೂರು: ಬೈಕ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪರಾರಿಯಾಗುತ್ತಿದ್ದ ಕಾರನ್ನು ಸಾರ್ವಜನಿಕರು ಅಡ್ಡಗಟ್ಟಿ ನಿಲ್ಲಿಸಿದ ಘಟನೆ ಪುತ್ತೂರು ಮುಖ್ಯರಸ್ತೆಯ ಅರುಣಾ ಚಿತ್ರಮಂದಿರದ ಬಳಿ ಅ.9 ರಂದು ನಡೆದಿದೆ.

ಈಶ್ವರಮಂಗಲ ನಿವಾಸಿ ಆದಿತ್ಯ ಎಡಪಡಿತ್ತಾಯ ಎಂಬವರು ಬೈಕ್ನಲ್ಲಿ ಮುಖ್ಯರಸ್ತೆಯಾಗಿ ಮನೆಗೆ ಹೋಗುತ್ತಿದ್ದ ವೇಳೆ ಅರುಣಾ ಚಿತ್ರಮಂದಿರದ ಬಳಿ ವಿರುದ್ಧ ದಿಕ್ಕಿನಿಂದ ಧೀರಜ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ರಾಂಗ್ ಸೈಡ್ಗೆ ಬಂದು ಬೈಕ್ಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಪಲ್ಟಿಯಾಗಿದ್ದರೂ ಕಾರನ್ನು ಅದರ ಚಾಲಕ ನಿಲ್ಲಿಸದೆ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿಯಾಗಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು ಕಾರನ್ನು ಹಿಂಬಾಲಿಸಿ ಪಾಂಗ್ಲಾಯಿಗೆ ಹೋಗುವ ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ಘಟನೆಯಿಂದ ಬೈಕ್ ಸವಾರ ಆದಿತ್ಯ ಎಡಪಡಿತ್ತಾಯರವರ ಕಾಲು ಮತ್ತು ಕೈಗೆ ಗಾಯವಾಗಿದ್ದು, ಅಪಘಾತದಿಂದ ಬೈಕ್, ಕಾರು ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.

ಪುತ್ತೂರು ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


























