ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೌರವಿಸುವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2022-23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಗೌರವ ಪ್ರಶಸ್ತಿಗೆ ಭಾಜನರಾಗಿದ್ದ ಸ್ಯಾಕ್ಸೋಫೋನ್ ವಾದಕ ‘ಡಾ.ಪಿ.ಕೆ. ದಾಮೋದರ್’ ರವರು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಮತ್ತು ವಿಟ್ಲ ಸಮೀಪದ ಪಡಿಬಾಗಿಲು ನಿವಾಸಿಯಾದ ಸ್ಯಾಕ್ಸೋಫೋನ್ ವಾದಕ ಡಾ.ಪಿ.ಕೆ. ದಾಮೋದರ್ ರವರಿಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾನ ಕಲಾಭೂಷಣ ವಿದುಷಿ ವಸಂತ ಮಾಧವಿ, ಉಷಾದಾತಾರ್, ಡಾ.ಎಸ್ ಮಂಜುಳಾ, ಪ್ರಕಾಶ್, ರಾಜಗೋಪಾಲ್ ಶ್ರೀರಂಗಪಟ್ಟಣ, ಅಕಾಡೆಮಿ ಅಧ್ಯಕ್ಷರಾದ ಅನೂರು ಅನಂತ ಕೃಷ್ಣ ಶರ್ಮ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

ದಾಮೋದರ ಅವರು ಕೃಷ್ಣ ಪುರುಷ ಮತ್ತು ಸುನಂದಾ ದಂಪತಿಗಳ ಪುತ್ರರಾಗಿದ್ದು, ಬಾಲ್ಯದಿಂದಲೇ ಸ್ಯಾಕ್ಸೋಫೋನ್ ವಾದನದಲ್ಲಿ ಆಸಕ್ತಿ ಹೊಂದ್ದಿದ್ದರು. ಇವರ ತಂದೆಯೂ ಕೂಡ ಸ್ಯಾಕ್ಸೋಫೋನ್ ವಾದಕರಾಗಿದ್ದು, ತಂದೆಯೇ ಇವರ ಮೊದಲ ಗುರುಗಳಾಗಿದ್ದಾರೆ.

ನಂತರದ ದಿನಗಳಲ್ಲಿ ಹಲವು ವಿದ್ವಾನ್ ಗಳ ಬಳಿ ಸಂಗೀತ ಅಭ್ಯಾಸ ಮಾಡಿದ ದಾಮೋದರ ಅವರು ಇದೀಗ ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿ ಖ್ಯಾತಿಗಳಿಸಿದ್ದು, ನೂರಾರು ಶಿಷ್ಯ ವೃಂದವನ್ನು ಹೊಂದಿದ್ದಾರೆ. ಈಗಾಗಲೇ ನಾದ ವಿಶಾರದೇ, ಕಲಾರತ್ನ, ನಾದಕೇಸರಿ, ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಮನ್ನಣೆಗಳಿಗೆ ಭಾಜನರಾಗಿದ್ದು, ಇದೀಗ 2022-23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

























