ಕೊಚ್ಚಿ: ಹಣಕಾಸಿನ ಸಮಸ್ಯೆಗಳು ದೂರವಾಗಿ, ಐಶ್ವರ್ಯ ಸಿದ್ಧಿಸುತ್ತದೆ ಎಂಬ ನಂಬಿಕೆಯೊಂದಿಗೆ ಇಬ್ಬರು ಮಹಿಳೆಯನ್ನು ಬಲಿ ಕೊಟ್ಟಿರೋ ಘಟನೆ ಕೇರಳದಲ್ಲಿ ನಡೆದಿದೆ.

ರೋಸಲಿನ್, ಪದ್ಮಾ ಬರ್ಬರವಾಗಿ ಕೊಲೆಯಾದ ಮಹಿಳೆಯರಾಗಿದ್ದಾರೆ.
ಇಬ್ಬರು ಜೀವನೋಪಾಯಕ್ಕಾಗಿ ಲಾಟರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಪ್ರಕರಣದ ಸಂಬಂಧ ದಂಪತಿ ಸೇರಿದಂತೆ, ಓರ್ವ ಮಂತ್ರವಾದಿಯನ್ನು ಪೊಲೀಸರು ಬಂಧನ ಮಾಡಿದ್ದು, ಇಂದು ಬೆಳಗ್ಗೆ ಕೇರಳದ ಎರ್ನಕೂಲಮ್ ಜಿಲ್ಲಾ ಸೆಕ್ಷನ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಅವರ ಪತ್ನಿ ಲೈಲಾ ಎಂದು ಗುರುತಿಸಿದ್ದು, ಇನ್ನೊಬ್ಬ ಆರೋಪಿ ರಶೀದ್ ಅಲಿಯಾಸ್ ಮುಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ.
ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಮೂವರು ಆರೋಪಿಗಳನ್ನು ಅಕ್ಟೋಬರ್ 26 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ದಿನ ನಿತ್ಯದ ಬದುಕು ಸಾಗಿಸಲು ಈ ಮಹಿಳೆಯರು ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ದಂಪತಿಗಳ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನದಲ್ಲಿ ಸಮೃದ್ಧಿಯನ್ನು ತರಲು ಆರೋಪಿಗಳು ನರಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಪತ್ತನಂತಿಟ್ಟದ ದಂಪತಿಗಳ ಮನೆಯ ಆವರಣದಿಂದ ಮೃತರ ಕತ್ತರಿಸಿದ ದೇಹದ ಭಾಗಗಳನ್ನು ಹೊರ ತೆಗೆಯಲಾಯಿತು. ಮಾನವ ದೇಹದ ಭಾಗಗಳನ್ನು ಬೇಯಿಸಿ ತಿಂದರೆ ಯೌವನ ಕಾಪಾಡಬಹುದು ಎಂದು ಆರೋಪಿ ದಂಪತಿಗೆ ಮೂರನೇ ಆರೋಪಿ ಹೇಳಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ರೋಸ್ಲಿನ್ ಅವರ ಮುಂಭಾಗದ ಪಕ್ಕೆಲುಬಿನ ಮಾಂಸವನ್ನು ಕತ್ತರಿಸಲಾಗಿತ್ತು. ಅಂದಹಾಗೆ ‘ನರಬಲಿ’ಯ ಮಾಸ್ಟರ್‌ಮೈಂಡ್ ಶಾಫಿಯೇ. ಮಾನವ ದೇಹದ ಅಂಗಾಂಗಗಳನ್ನು ಬೇಯಿಸಿ ತಿಂದರೆ ಯೌವನ ಕಾಪಾಡಬಹುದು ಎಂದು ಭಗವಲ್ ಸಿಂಗ್ ಮತ್ತು ಲೈಲಾ ಅವರಿಗೆ ಈತನೇ ಸಲಹೆ ನೀಡಿದ್ದು. ಶಾಫಿ ರಕ್ತ ಮತ್ತು ವಿರೂಪಗೊಳಿಸುವ ಕ್ರಿಯೆಯನ್ನು ನೋಡುವಾಗ ಉನ್ಮಾದ ಪಡೆಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಲೈಲಾಗೆ ಈ ಬಗ್ಗೆ ಯಾವುದೇ ಮರುಕವಿಲ್ಲ. ‘ನರಬಲಿ ಆಚರಣೆ’ ಅವರನ್ನು ಶೀಘ್ರದಲ್ಲೇ ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಅವರು ಇನ್ನೂ ನಿರೀಕ್ಷಿಸುತ್ತಿದ್ದಾರೆ ಎಂದು ತನಿಖೆಯ ಗೌಪ್ಯ ಮೂಲಗಳು ಹೇಳಿವೆ.
ಪೊಲೀಸರ ಪ್ರಕಾರ ಹತ್ಯೆಯಾದವರು ಸುಮಾರು 50 ರ ಆಸುಪಾಸಿನವರು ಎಂದು ಹೇಳಲಾಗಿದ್ದು, ಕೊಚ್ಚಿಯ ಕಡವಂತರಾ ಮತ್ತು ಸಮೀಪದ ಕಾಲಡಿ ನಿವಾಸಿಗಳು. ಈ ವರ್ಷದ ಸೆಪ್ಟೆಂಬರ್ ಮತ್ತು ಜೂನ್‌ನಲ್ಲಿ ಮಹಿಳೆಯರು ನಾಪತ್ತೆಯಾಗಿದ್ದರು ಅವರ ಮೊಬೈಲ್ ಫೋನ್ ವಿವರಗಳು ಮತ್ತು ಟವರ್ ಸ್ಥಳಗಳನ್ನು ಆಧರಿಸಿ ಅಂತಿಮವಾಗಿ ತನಿಖೆಯು ‘ನರಬಲಿ’ಯ ಕಥೆಯನ್ನು ಬಿಚ್ಚಿಟ್ಟಿದೆ. ನಾಪತ್ತೆಯಾದ ಮೊದಲ ಮಹಿಳೆ ಕಾಲಡಿ ಮೂಲದವರಾಗಿದ್ದು, ಸ್ವಲ್ಪ ಸಮಯದಿಂದ ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದರು. ಆಗಸ್ಟ್ 17 ರಂದು ಅವರ ಮಗಳು ಅಮ್ಮ ಕಾಣೆಯಾಗಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ.
ತಮಿಳುನಾಡಿನ ಧರ್ಮಪುರಿ ಮೂಲದ ಮತ್ತೋರ್ವ ಮಹಿಳೆ ಆಗಸ್ಟ್ 17 ರಂದು ನಾಪತ್ತೆಯಾಗಿದ್ದರು ಎಂದು ಆಕೆಯ ಸಹೋದರಿ ದೂರಿದ್ದರು. ಎಲಂತೂರಿನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಮೃತದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಯಿತು ಎಂದು ಆರೋಪಿಗಳ ತಪ್ಪೊಪ್ಪಿಗೆಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

























