ಪುತ್ತೂರು: ಗಾಂಜಾ ಸೇವನೆ ಮಾಡಿ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ಬಂಧಿಸಿದ ಘಟನೆ ಕಬಕ ಗ್ರಾಮದ ಪೋಳ್ಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ನಡೆದಿದೆ.
ಕಬಕದ ಕಲ್ಲಂದಡ್ಕ ನಿವಾಸಿ ಉಮ್ಮರ್ ಫಾರೂಕ್(36) ಬಂಧಿತ ವ್ಯಕ್ತಿ.

ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಪುತ್ತೂರು ತಾಲೂಕು ಕಬಕ ಗ್ರಾಮದ ಪೋಳ್ಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರನ್ನು ಉದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ನೀಡುತ್ತಿರುವುದಾಗಿ ಮಾಹಿತಿ ಬಂದ ಪ್ರಕಾರ ಸ್ಥಳಕ್ಕೆ ತೆರಳಿದ್ದು, ಈ ವೇಳೆ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದ್ದು, ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಿಂದ ಇಳಿದು ಸದ್ರಿ ವ್ಯಕ್ತಿಯ ಬಳಿ ತೆರಳಿ ಆತನನ್ನು ವಿಚಾರಿಸಿದಾಗ ಆತನು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಸಂಶಯ ಇರುವುದು ಕಂಡು ಬಂದಿರುದರಿಂದ ಆತನನ್ನು ವಶಕ್ಕೆ ಪಡೆದರು.
ಠಾಣೆಗೆ ಕರೆದುಕೊಂಡು ಬಂದು ಸಿಬ್ಬಂದಿಗಳ ಭದ್ರಿಕೆಯಲ್ಲಿ ಮಂಗಳೂರು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದಾಗ ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ ಆತನು ಗಾಂಜಾ ಸೇವನೆ ಮಾಡಿರುತ್ತಾನೆ ಎಂಬುದಾಗಿ ವೈದ್ಯಕೀಯ ದೃಡಪತ್ರ ನೀಡಿದ್ದಾರೆ ಈ ಹಿನ್ನಲೆ ಆತನನ್ನು ಬಂಧಿಸಿದರು.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 84/2022 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕಾರ್ಯಚರಣೆಯಲ್ಲಿ ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳಾದ ವಸಂತ ಗೌಡ, ಜಗದೀಶ, ಸ್ಕರಿಯಾ, ಕಿರಣ್ ಕುಮಾರ್ ಭಾಗವಹಿಸಿದ್ದರು.























