ಪುತ್ತೂರು: ನಾಯಿ ಮರಿಯೊಂದಕ್ಕೆ ಮಕ್ಕಳ ವಿಭಾಗದಲ್ಲಿ ಅರ್ಧ ಟಿಕೆಟ್ ದರ ಪಡೆದ ಘಟನೆ ಅ.15ರಂದು ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಯುವತಿಯೋರ್ವಳು ಒಂದು ತಿಂಗಳ ನಾಯಿ ಮರಿಯೊಂದನ್ನು ಪ್ಲಾಸ್ಟಿಕ್ ಬ್ಯಾಗಲ್ಲಿ ಹಿಡಿದುಕೊಂಡಿದ್ದರು. ಯುವತಿ ಪ್ರತಿದಿನ ಪುತ್ತೂರಿನಿಂದ ಮಾಣಿಗೆ ಪ್ರಯಾಣಿಸುತ್ತಿರುವ ಹಿನ್ನೆಲೆ ಬಸ್ ಪಾಸ್ ಮಾಡಿಸಿದ್ದು, ಬಸ್ ನಿರ್ವಾಹಕ ಮಕ್ಕಳ ವಿಭಾಗದಲ್ಲಿ ನಾಯಿ ಮರಿಗೂ ಅರ್ಧ ಟಿಕೆಟ್ ದರ ಪಡೆದುಕೊಂಡಿದ್ದಾರೆ.

ನಾಯಿ ಮರಿಯೊಂದು ಅನಾಥವಾಗಿ ಪುತ್ತೂರು ಸರಕಾರಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದನ್ನು ಗಮನಿಸಿದ ಯುವತಿಯೋರ್ವಳು ಮನೆಗೆ ಕರೆದೊಯ್ದು ಸಾಕಲೆಂದು ಕೆ.ಎ. 21 ಎಫ್.0127 ಬಸ್ ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಬಸ್ ಚಾಲಕ ನಾಯಿ ಮರಿಗೂ ಟಿಕೆಟ್ ತೆಗೆಯುವಂತೆ ನಿರ್ವಾಹಕ ನಲ್ಲಿ ಹೇಳಿದ್ದು, ಈ ಹಿನ್ನೆಲೆ ಬಸ್ ನಿರ್ವಾಹಕ ಮಾಣಿಯವರೆಗೆ ನಾಯಿ ಮರಿಗೆ 11 ರೂ. ಟಿಕೆಟ್ ಪಡೆದಿದ್ದಾರೆ.

ಸಣ್ಣ ಪ್ರಾಯದ ಮಕ್ಕಳು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ಅರ್ಧ ಟಿಕೆಟ್ ವಿಭಾಗದಡಿ 11 ರೂ. ಟಿಕೆಟ್ ನೀಡಲಾಗುತ್ತಿದ್ದು, ಅದೇ ರೀತಿ ಪುಟಾಣಿ ನಾಯಿ ಮರಿಗೂ ಟಿಕೆಟ್ ನೀಡಿದ್ದು, ಹಾಸ್ಯಾಸ್ಪದವಾಗಿದೆ ಎಂದು ಸ್ವತಃ ಪ್ರಯಾಣಿಕರೇ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.


























