ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಇದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು ತೀರ್ಪು ನೀಡಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ನ್ಯಾಯಾಲಯವು ತೀರ್ಪು ಕಾಯ್ದಿರಿಸಿ ಕಲಾಪವನ್ನು ನ.9ಕ್ಕೆ ಮುಂದೂಡಿದೆ.
ಸದ್ಯದ ಮಟ್ಟಿಗೆ ಮಳಲಿ ಮಸೀದಿ ಕಟ್ಟಡವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ. ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಆಕೃತಿಯ ಕಟ್ಟಡ ಇದೆ. ಮಸೀದಿ ಸಮುಚ್ಚಯದ ಸರ್ವೇಕ್ಷಣೆಗೆ ಆದೇಶ ಮಾಡಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಮನವಿ ಮಾಡಿದ್ದವು. ಇನ್ನು ವಿರೋಧಿಸಿದ್ದ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಯಕ್ಕೆ ಇಲ್ಲ ಎಂದು ಹೇಳಿದ್ದವು. ವಿಚಾರಣೆ ಅಧಿಕಾರ ವ್ಯಾಪ್ತಿಯ ಕುರಿತು ನ್ಯಾಯಾಲಯವು ಇಂದು ತೀರ್ಪು ನೀಡಬೇಕಿತ್ತು.
ಮಳಲಿ ಮಸೀದಿ ಜಾಗದಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಕ್ಷೇಪಿಸಿದ್ದ ಮಸೀದಿ ಮಂಡಳಿ, ಇಂಥ ಆದೇಶ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿತ್ತು. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯವು ಆಗಸ್ಟ್ 27 ರಂದೇ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅ 17ಕ್ಕೆ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ಇಂದು ಮತ್ತೊಮ್ಮೆ ತೀರ್ಪು ಕಾಯ್ದಿರಿಸಿದ್ದು, ನ 9ಕ್ಕೆ ಕಲಾಪವನ್ನು ಮುಂದೂಡಲಾಗಿದೆ.

























