ಪುಂಜಾಲಕಟ್ಟೆ: ಶ್ರೀರಾಮನಗರ ಪ್ರಗತಿ ಹಾರ್ಡ್ ವೇರ್ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಕಪ್ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪಾಂಡವರಕಲ್ಲು ಕುದ್ರು ನಿವಾಸಿ ಇಬ್ರಾಹಿಂ ಅವರ ಪುತ್ರ ಸಾಹಿಲ್ (21) ಮೃತ ಯುವಕ.

ನಿನ್ನೆ ಸಂಜೆ ನಡೆದ ಗೂಡ್ಸ್ ಟೆಂಪೊ ಹಾಗೂ ಪಿಕಪ್ ನಡುವಿನ ಅಪಘಾತದಲ್ಲಿ ಪಿಕಪ್ ನಲ್ಲಿದ್ದ ಸಾಹಿಲ್ ಹಾಗೂ ಅವಿನಾಶ್ ಮತ್ತು ಮಿನಿ ಲಾರಿ ಚಾಲಕ ಧೀರಜ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.
ತಲೆ ಮತ್ತು ಎದೆಗೆ ಗಂಭೀರ ಗಾಯಗೊಂಡಿದ್ದ ಹಿನ್ನೆಲೆ ಸಾಹಿಲ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ..
ಇಬ್ರಾಹಿಂ ಅವರ ನಾಲ್ವರು ಮಕ್ಕಳಲ್ಲಿ ಸಾಹಿಲ್ ಕೊನೆಯವರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಚಾಲಕರಾಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಮೂವರು ಸಹೋದರಿಯರನ್ನು ಅಗಲಿದ್ದಾರೆ.

























