ಬೆಳ್ತಂಗಡಿ: ಮೆದುಳಿನ ನರ ದೌರ್ಬಲ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಒಟ್ಲ ನಿವಾಸಿ ದೇವರಾಜ್ ಹಾಗೂ ಜಾನಕಿ ದಂಪತಿಗಳ ಪುತ್ರಿ ಶಿಲ್ಪಾ (33) ಮೃತ ಮಹಿಳೆ.

ಶಿಲ್ಪಾ ಅವರು ಕಳೆದ ಹಲವು ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದೇವರಾಜ್ ದಂಪತಿಗಳ ಐವರು ಪುತ್ರಿಯರಲ್ಲಿ ಕೊನೆಯವಳಾದ ಶಿಲ್ಪಾ ಮನೆಗೆ ಆಧಾರವಾಗಿದ್ದರು. ಕಳೆದ 9 ತಿಂಗಳಿನಿಂದ ಮೆದುಳಿನ ನರ ದೌರ್ಬಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇವರ ಚಿಕಿತ್ಸೆಗಾಗಿ ಹಲವು ಸಂಘ-ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿದ್ದರು. ಇವರ ನಿಧನಕ್ಕೆ ಯೋಜನೆಯ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಮೃತರು ತಂದೆ, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.


























