ಪುತ್ತೂರು: ಗುಡ್ಡದಲ್ಲಿ ಹುಲ್ಲು ತೆಗೆಯುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಮರದ ಬುಡದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಅ.21 ರಂದು ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಳದಲ್ಲಿ ನಡೆದಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಾ.ಗಿರೀಶ್ ಮತ್ತು ಲ್ಯಾಬ್ ಅಸಿಸ್ಟೆಂಟ್ ಸುಶಾಂತ್ ಅವರು ಆಗಮಿಸಿ ತೆಂಗಿನ ಬುಡದಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ತಲೆಬುರುಡೆ ಮತ್ತು ಅಸ್ಥಿಪಂಜರವನ್ನು ಒಂದೊಂದಾಗಿ ಪರಿಶೀಲಿಸಿ ಮೇಲಕ್ಕೆ ತೆಗೆದರು.
ಮೃತ ವ್ಯಕ್ತಿಯ ಎದೆಗೂಡು ಮಣ್ಣಿನಡಿಯಲ್ಲಿ ಹೂತು ಹೋಗಿತ್ತು. ವ್ಯಕ್ತಿ ಧರಿಸಿದ್ದ ಬಟ್ಟೆ ಅದನ್ನು ಸುತ್ತುವರಿದಿತ್ತು. ಶರ್ಟ್ ಕಿಸೆಯಲ್ಲಿ ಪ್ಲಾಸ್ಟಿಕ್ ಕವರ್ ಇದ್ದು, ಆ ಪ್ಲಾಸ್ಟಿಕ್ ಕವರ್‌ನ ಒಳಗೆ ಬಿಡಿಸಲಾಗದಂತಿರುವ 100 ರೂ. ಮತ್ತು 50ರ ನೋಟು ಮತ್ತು ಚಿಲ್ಲರೆ ಕಾಯಿನ್‌ಗಳು ಹಾಗೂ ಸಣ್ಣ ಕೀ ಪತ್ತೆಯಾಗಿತ್ತಲ್ಲದೆ, ಒಂದು ಜೊತೆ ಚಪ್ಪಲು ಕೂಡ ಪತ್ತೆಯಾಗಿತ್ತು.
ವಿಧಿ ವಿಜ್ಞಾನ ತಂಡ ಅಸ್ಥಿ ಪಂಜರ ಮತ್ತು ಪತ್ತೆಯಾದ ಸೊತ್ತುಗಳನ್ನು ಪ್ರತ್ಯೇಕಗೊಳಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪತ್ತೆಯಾದ ಅಸ್ಥಿಪಂಜರದಿಂದ ದವಡೆ, ತೊಡೆ ಮತ್ತು ಕೆಲ ಭಾಗವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗಿದ್ದು, ಉಳಿದ ಅಸ್ಥಿಪಂಜರಗಳನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಎಸ್.ಐ.ಶ್ರೀಕಾಂತ್ ರಾಥೋಡ್, ಎ.ಎಸ್.ಐ ಲೋಕನಾಥ್ ಸಹಿತ ಪೊಲೀಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


























