ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಆ ಮೂಲಕ ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಸರ್ಕಾರ ದೀಪಾವಳಿ ಗಿಫ್ಟ್ ನೀಡಿದೆ.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಕ್ರಮವಾಗಿ 2% ಮತ್ತು 4% ಮೀಸಲಾತಿಯನ್ನು ಸರ್ಕಾರ ಹೆಚ್ಚಿಸಿದೆ. ಮೀಸಲಾತಿ ಪ್ರಮಾಣ 50% ರಿಂದ 56%ಕ್ಕೆ ಹೆಚ್ಚಿಸಲಾಗಿದೆ.
ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾಗಿರುವ ಪ್ರಮಾಣ 50% ಮೀರಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ವಿಶೇಷ ಸಂದರ್ಭದಲ್ಲಿ ಮಾತ್ರ ಮೀಸಲಾತಿ ಪ್ರಮಾಣ ಹೆಚ್ಚಿಸಬಹುದೆಂದೂ ಕೋರ್ಟ್ ತಿಳಿಸಿತ್ತು. ಇದೀಗ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕ್ರಮವನ್ನು ವಿಶೇಷ ಸಂದರ್ಭದ ವ್ಯಾಪ್ತಿಗೆ ತರಲು ಸರ್ಕಾರ ಮುಂದಾಗಿದೆ.
ಈ ಸಂಬಂಧ 9ನೇ ಶೆಡ್ಯೂಲ್‌ಗೆ ಈಗಿನ ನಿರ್ಧಾರ ಸೇರಿಸಲು ಸರ್ಕಾರ ಪ್ರಕ್ರಿಯೆ ಕೈಗೊಳ್ಳಲಿದೆ. ತಮಿಳುನಾಡು 50% ರಿಂದ 69% ಕ್ಕೆ ಮೀಸಲಾತಿ ಏರಿಸಿ 9ನೇ ಪರಿಚ್ಛೇದದ ವ್ಯಾಪ್ತಿಗೆ ಸೇರಿದೆ. ಇದೇ ಮಾದರಿ ಅನುಸರಿಸಲು ರಾಜ್ಯ ಸರ್ಕಾರ ಮುಂದಾಗಿದೆ.


























