ಉಡುಪಿ: ದೇಶಾದ್ಯಂತ ಕಾಂತಾರ ಚಿತ್ರದ ಹವಾ ಜೋರಾಗಿದೆ. ಉಡುಪಿ ಜಿಲ್ಲೆಯಲ್ಲಿ ದೀಪಾವಳಿಗೆ ‘ಕಾಂತಾರ’ ರಂಗೋಲಿಯೊಂದು ಸಿದ್ಧವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಸಾಲಿಗ್ರಾಮ ವಿಶ್ವಕರ್ಮ ಸಭಾ ಭವನದಲ್ಲಿ ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ ಆಚಾರ್ಯ ಎಂಬುವವರು ಸುಮಾರು 7 ಅಡಿ ಎತ್ತರ, 9 ಅಡಿ ಅಗಲವಿರುವ ‘ಕಾಂತಾರ’ ರಂಗೋಲಿಯನ್ನ ಬಿಡಿಸಿ ಸಿನಿತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪಂಜುರ್ಲಿ ದೈವದ ವೇಷ ಕಟ್ಟಿರುವ ಮತ್ತು ಕೋಣ ಓಡಿಸುವ ರಿಷಭ್ ಶೆಟ್ಟಿಯವರನ್ನು ಹೋಲುವ ರಂಗೋಲಿ ರಚಿಸಿದ್ದು, ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ದೈವಾರಾಧನೆ ಅಧ್ಯಯನಕ್ಕೆ ಹೆಚ್ಚಿದ ಒತ್ತಾಯ..!!
ಇನ್ನು, ಕಾಂತಾರ ಚಿತ್ರದ ಭಾರೀ ಯಶಸ್ಸಿನ ಬಳಿಕ ದೈವಾರಾಧನೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ವಿಶ್ವದ ದೃಷ್ಟಿ ಕರಾವಳಿಯತ್ತ ತಿರುಗಿದ್ದು, ತುಳು ಮಣ್ಣಿನ ಕಾರ್ಣಿಕ ದೈವಗಳ ಮೇಲಿನ ನಂಬಿಕೆ, ಆರಾಧನೆ ಬಗ್ಗೆ ಅಸಕ್ತಿ ಮೂಡಿಸಿದೆ. ಇದೀಗ, ದೈವಾರಾಧನೆ ಕುರಿತು ಅಧ್ಯಯನ ಪೀಠ ಹಾಗೂ ಅಕಾಡೆಮಿ ಆರಂಭಕ್ಕೆ ದೈವ ಪಾತ್ರಿಗಳ ನಲಿಕೆ, ಪರವ, ಪಂಬದ ಸಮುದಾಯದಿಂದ ಒತ್ತಾಯ ಕೇಳಿ ಬರುತ್ತಿದೆ. ತುಳುನಾಡಿನ ಕಾರ್ಣಿಕದ ನೂರಾರು ದೈವಗಳ ಬಗ್ಗೆ ಅಧ್ಯಯನಕ್ಕೆ ಒತ್ತು ಕೊಡಲು ಕೂಗು ಕೇಳಿಬರುತ್ತಿದೆ.


























