ಪುತ್ತೂರು: ಮಹಿಳಾ ಪದವಿ ಕಾಲೇಜಿನ ಕಲಾ ವಿಭಾಗದಲ್ಲಿ ಈ ಬಾರಿ ತೇರ್ಗಡೆಗೊಂಡಿದ್ದ ವಿದ್ಯಾರ್ಥಿನಿಯೋರ್ವಳು ಅನಾರೋಗ್ಯದಿಂದಾಗಿ ಹಠಾತ್ ಸಾವನ್ನಪ್ಪಿದ ಘಟನೆ ಮಂಚಿಯಲ್ಲಿ ನಡೆದಿದೆ.
ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ ರತಿ ಕುಲಾಲ್ ರವರ ಮಗಳು ಭವ್ಯ ಮೃತ ಯುವತಿ.

ಭವ್ಯ ರವರು ಪುತ್ತೂರಿನ ಮಹಿಳಾ ಪದವಿ ಕಾಲೇಜಿನಲ್ಲಿ 2019-2022 ಅವಧಿಯಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚಿಗೆ ನಡೆದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರು.
ಭವ್ಯ ಕೆಲ ದಿನಗಳಿಂದ ತಲೆನೋವಿಗೆ ಔಷಧ ತೆಗೆದುಕೊಳ್ಳುತ್ತಿದ್ದು, ನಿನ್ನೆ ರಾತ್ರಿ ತಲೆನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಳು. ಆದರೇ ತಡರಾತ್ರಿ ತಲೆನೋವು ಜಾಸ್ತಿಯಾಗಿ ವಾಂತಿ ಮಾಡುತ್ತಿದ್ದ ಭವ್ಯಾಳನ್ನು ಮುಂಜಾನೆ ವೇಳೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.
ಆದರೇ ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದ ದಾರಿ ಮಧ್ಯೆ ಭವ್ಯಾ ಮೃತಪಟ್ಟ ಬಗ್ಗೆ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಹರೀಶ್ ರವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




























