ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ತಡರಾತ್ರಿ ಬೈಕ್ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಅನ್ಯಕೋಮಿನ ದುಷ್ಕರ್ಮಿಗಳು ಕೊಲೆಯಾದ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಇದರಿಂದಾಗಿ ಶಾಂತವಾಗಿದ್ದ ಜಿಲ್ಲೆ ಮತ್ತೆ ಪ್ರಕ್ಷುಬ್ಧ ವಾತಾವರಣಕ್ಕೆ ತಿರುಗಿದಂತಾಗಿದೆ.
ಸ್ಥಳೀಯರು ಬೆನ್ನಟ್ಟಲು ಆರಂಭಿಸಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳು ಪ್ರಕಾಶ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ನಡೆಸಿದ್ದು, ಎಸ್ಪಿ ಮಿಥುನ್ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಹಿಜಾಬ್ ನಂತರ ಉಂಟಾದ ಕಲಹ ಹರ್ಷನ ಕೊಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಶಾಂತ ಸ್ಥಿತಿಗೆ ಮರಳಿದ್ದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ನಲ್ಲಿ ಕೂಗುತ್ತಾ ಓಡಾಡಿದ ಅನ್ಯಕೋಮಿನ ಯುವಕರ ಗುಂಪೊಂದು ಮೃತ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ.
ಮಾಹಿತಿ ತಿಳಿದ ಸ್ಥಳೀಯರು ದುಷ್ಕರ್ಮಿಗಳನ್ನು ಹಿಂಬಾಲಿಲು ಆರಂಭಸಿದರೂ ಅಷ್ಟರಲ್ಲಾಗಲೇ ಪರಾರಿಯಾಗಿದ್ದರು. ಈ ವೇಳೆ ಭರಮಪ್ಪ ನಗರದಲ್ಲಿ ಪ್ರಕಾಶ್ (25) ಎಂಬ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೀಗೆಹಟ್ಟಿ ಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.