ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಹಾಡೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆಯಾಜ್ಞೆ ನೀಡಲಾಗಿದ್ದು, ಇದರಿಂದಾಗಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಈ ಹಾಡನ್ನು ನಾನು ಯಾವುದರಿಂದಲೂ ಕದ್ದಿಲ್ಲ ಎಂದು ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು. ಆದರೂ, ಕೇರಳದ ಕೊಯಿಕ್ಕೋಡು ಕೋರ್ಟ್ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿದೆ.
ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿಯೂ ತಿಳಿಸಿತ್ತು. ಹಾಗಾಗಿ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋಯಿಕ್ಕೋಡ್ನ ಕೋರ್ಟ್ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರಿದೆ. ‘ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಯೂಟ್ಯೂಬ್ ಸೇರಿ ಇತರ ಪ್ಲಾಟ್ಫಾರ್ಮ್ಗಳು ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿದೆ.


























