ಅದು ಅಕ್ಟೋಬರ್ 29, 2021, ಒಂದು ಶಾಕಿಂಗ್ ಸುದ್ದಿ ಕೇಳಿ ಬಂತು. ‘ಪುನೀತ್ಗೆ ಹೃದಯಾಘಾತ ಆಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂಬ ಸುದ್ದಿ ಹೊರಬಿತ್ತು. ಪುನೀತ್ ಫಿಟ್ ಆಗಿ ಇದ್ದವರು. ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅವರಿಗೆ ಹೃದಯಘಾತವಾಗಿದೆ ಎಂದಾಗ ಯಾರೂ ನಂಬಲಿಲ್ಲ. ಕೆಲವೇ ಗಂಟೆಗಳಲ್ಲಿ ಪುನೀತ್ ನಿಧನವಾರ್ತೆ ಹೊರಬಿತ್ತು. ಈ ಘಟನೆ ನಡೆದು ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಕಳೆದಿದೆ.

ಅಭಿಮಾನಿಗಳ ಪಾಲಿನ ‘ಅಪ್ಪು’, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ‘ಪುನೀತ್ ರಾಜ್ ಕುಮಾರ್’, ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ಬಹುಮುಖ ಪ್ರತಿಭೆಯ ಮೂಲಕ ಬಾಲ ನಟನಾಗಿ ಕಾಲಿಟ್ಟು ಅಭಿಮಾನಿಗಳ ಮನದಂಗಳಕ್ಕೆ ಲಗ್ಗೆ ಹಾಕಿದ್ದರು.
ಅಪ್ಪು ಭೌತಿಕವಾಗಿ ಇಲ್ಲದಿರಬಹುದು. ಆದರೆ, ಕಳೆದೊಂದು ವರ್ಷದಲ್ಲಿ ಅವರ ಅಭಿಮಾನಿಗಳು ದುಪ್ಪಟ್ಟಾಗಿದ್ದಾರೆ. ಅವರೆಲ್ಲರೂ ಪ್ರತಿದಿನವೂ ‘ಅಪ್ಪು’ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ‘ಅಪ್ಪು, ಅಪ್ಪು’ ಎಂದು ಸ್ಮರಿಸುತ್ತಾ, ಸಮಾಜಸೇವೆ ಮಾಡುತ್ತಾ ಅಭಿಮಾನಿಗಳು ಕಳೆದೊಂದು ವರ್ಷದಿಂದ ಬದುಕುತ್ತಿದ್ದಾರೆ.
ಅಕ್ಟೋಬರ್ 28 ರಂದು ‘ಪುನೀತ್ ರಾಜ್ಕುಮಾರ್’ ರವರ ಕನಸಿನ ಚಿತ್ರ ‘ಗಂಧದ ಗುಡಿ’ ಬಿಡುಗಡೆ ಆಗಿದೆ. ಪುಣ್ಯತಿಥಿ ಸಂದರ್ಭದಲ್ಲೇ ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ‘ಗಂಧದ ಗುಡಿ’ ನೋಡಿದವರು ಕಣ್ಣೀರು ಹಾಕುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಶೋ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.


























