ಪುತ್ತೂರು: ಮುಂಬರುವ ದಸರಾ ಹಬ್ಬದಲ್ಲಿ ಕೇವಲ ದೇವಸ್ಥಾನದ ಆವರಣದೊಳಗೆ ಮಾತ್ರ ಹುಲಿವೇಷಧಾರಿಗಳಿಗೆ ಹರಕೆ ಅರ್ಪಿಸಲು ಷರತ್ತುಬದ್ಧ ಅನುಮತಿ ನೀಡಲು ಜಿಲ್ಲಾ ಧಾರ್ಮಿಕ ಪರಿಷತ್‍ನ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅ.13ರಂದು ನಡೆದ ದ.ಕ.ಜಿಲ್ಲೆಯ ಮೂರನೇ ಧಾರ್ಮಿಕ ಪರಿಷತ್ತಿನ ಆರನೇ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಮುಂಬರುವ ದಸರಾ ಹಬ್ಬದಲ್ಲಿ ದೇವಸ್ಥಾನದ ಆವರಣದೊಳಗೆ ಮಾತ್ರ ಶ್ರದ್ಧೆ ಭಕ್ತಿಯಿಂದ ಗರಿಷ್ಠ 10 ಮಂದಿ ಹುಲಿ ವೇಷಧಾರಿಗಳಿಗೆ ನಿಗದಿತ ಕಾಲಮಿತಿಯೊಳಗೆ ಹರಕೆ ಅರ್ಪಿಸಲು ಮಾತ್ರ ಷರತ್ತುಬದ್ಧ ಅನುಮತಿ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.ಈ ರೀತಿ ಹರಕೆ ಸಲ್ಲಿಸುವಾಗ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಸರ್ ಬಳಸುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ದೇವಸ್ಥಾನದ ಆಡಳಿತದಾರರ ಜವಾಬ್ದಾರಿಯಾಗಿರುತ್ತದೆ.ಯಾವುದೇ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಮತ್ತು ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ದೇವಳದ ಆಡಳಿತದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲೂ ಸಭೆಯಲ್ಲಿ ನಿರ್ಣಯಿಸಲಾಯಿತು.ದೇವಸ್ಥಾನದ ಹೊರಗೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲು ಸಭೆ ನಿರ್ಣಯಿಸಿದೆ.
ಪಟಾಕಿಗೆ ನಿಬಂಧ: ಪಟಾಕಿ ಹಾಗೂ ಸುಡುಮದ್ದು ಸಂಪೂರ್ಣವಾಗಿ ನಿಷೇಧಿಸಲೂ ಸಭೆಯಲ್ಲಿ ನಿರ್ಣಯಿಸಲಾಯಿತು.ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಸೂರ್ಯ ಕಶೆಕೋಡಿ, ಸೂರ್ಯನಾರಾಯಣ ಭಟ್, ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಯವರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.