ಮಂಗಳೂರು: ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020ರ ಕಲಂ 8(4) ಹಾಗೂ 8(5)ರಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೋವು ಅಕ್ರಮ ವಧೆ ಪ್ರಕರಣದಲ್ಲಿ ವಧಾ ಸ್ಥಳದ ಮಾಲಕ ಯಾಕೂಬ್ ಹೆಸರಿನಲ್ಲಿ ಅಡ್ಕೂರು ಗ್ರಾಮದ ಅದ್ಯಪಾಡಿಯಲ್ಲಿ ಡೋರ್ ನಂ.1-337 (ಸ.ನಂ.33/6)ರ 15 ಸೆಂಟ್ಸ್ ಜಮೀನನ್ನು ಸರಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕುವಂತೆ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮದನಮೋಹನ್ ಸಿ. ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಹಾಗೂ ಇತರ ಸೊತ್ತುಗಳನ್ನು ಸಕ್ಷಮ ಪ್ರಾಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ, ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೂರುದಾರರಾದ ಕಂಕನಾಡಿ ನಗರ ಠಾಣಾ ಉಪನಿರೀಕ್ಷಕರಿಗೆ ಸೂಚಿಸಿದ್ದಾರೆ.
ಪ್ರಕರಣದಲ್ಲಿ 3ನೇ ಸಿಜೆಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಮುಕ್ತಾಯವಾದ ಅನಂತರ ಅಂತಿಮ ವರದಿ ಹಾಗೂ 3ನೇ ಸಿಜೆಎಂ ನ್ಯಾಯಾಲಯದ ಅಂತಿಮ ಆದೇಶ ಪ್ರತಿಯನ್ನು ಎಸಿ ಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಮಂಗಳೂರು ತಾಲೂಕು ತಹಶೀಲ್ದಾರ್ ಜಮೀನಿಗೆ ಸಂಬಂಧಪಟ್ಟಂತೆ ಪಹಣಿ ಪತ್ರದ ಕಲಂ 11ರಲ್ಲಿ ಮುಂದಿನ ಆದೇಶದ ವರೆಗೆ ನ್ಯಾಯಾಲಯದಿಂದ ಜಪ್ತಿ ಆಗಿರುವ ಬಗ್ಗೆ ನಮೂದು ಮಾಡುವಂತೆ ಹಾಗೂ ಪಂಚಾಯತ್ ದಾಖಲೆಗಳಲ್ಲೂ ಈ ಬಗ್ಗೆ ನಮೂದು ಮಾಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.



























