ಉಪ್ಪಿನಂಗಡಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್.ಐ.ಎ ಅಧಿಕಾರಿಗಳ ತಂಡ ನೆಲ್ಯಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಸಾದಿಕ್ ಎಂಬವರ ಮನೆಗೆ ನ.5 ರಂದು ಬೆಳಿಗ್ಗೆ ದಾಳಿ ನಡೆಸಿದೆ.

ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಎಂಬಲ್ಲಿರುವ ಸಾದಿಕ್ ಮನೆಗೆ ದಾಳಿ ನಡೆಸಿರುವ ಎನ್.ಐ.ಎ ತಂಡ ಶೋಧ ಕಾರ್ಯ ನಡೆಸುತ್ತಿದೆ. ದಾಳಿ ವೇಳೆ ಸಾದಿಕ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಸಾದಿಕ್ ನೆಲ್ಯಾಡಿಯಲ್ಲಿ ಕೆಲ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದು, ಕೆಲ ವರ್ಷಗಳ ಹಿಂದೆ ಬಿ.ಸಿರೋಡಿನಲ್ಲಿ ನಡೆದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಲ್ಲಿ ಸಾದಿಕ್ ರನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.


























