ವಿಟ್ಲ: ಕೊಳ್ನಾಡು ಗ್ರಾಮದ ಕುಳಾಲು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡು ಶುಕ್ರವಾರ ಸುರಿದ ಮಳೆಯ ಪರಿಣಾಮ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿದ ಘಟನೆ ನಡೆದಿದೆ.

ಕಟ್ಟಡದಿಂದ ಅಪಾಯ ಸಂಭವಿಸಬಹುದು ಎಂಬ ದೂರ ಗ್ರಹಿಕೆಯಿಂದ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಕೊಳ್ನಾಡು ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಚರ್ಚಿಸಿ, ಕೇವಲ 5 ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮತ್ತೂಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದರು.

ಶಾಲೆಗೆ 92 ವರ್ಷಗಳಾಗಿದ್ದು, 6 ಕೊಠಡಿಗಳಿವೆ. ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ ಆರು ಹೊಸ ಕೊಠಡಿಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ , ಶಾಸಕರಿಗೆ 2019ರಿಂದ ಮನವಿ ನೀಡುತ್ತಿದ್ದರೂ ಈವರೆಗೂ ಪ್ರಯೋಜನವಾಗಿಲ್ಲ. ಅಪಾಯದ ಮುನ್ಸೂಚನೆ ಅರಿತ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸಮಿತಿಯವರು ಮೂರು ದಿನಗಳ ಹಿಂದಷ್ಟೇ ನಲಿಕಲಿ ತರಗತಿಯ ಪುಟಾಣಿಗಳನ್ನು ಬೇರೊಂದು ಕಾಲಾಸಿಗೆ ವರ್ಗಾಯಿಸಿದ್ದರು. ಪುಟಾಣಿಗಳ ಅದೃಷ್ಟವೋ ಎಂಬಂತೆ ಶುಕ್ರವಾರ ರಾತ್ರಿ ಕೊಠಡಿಯ ಮೇಲ್ಛಾವಣಿ ಕುಸಿದು ನೆಲಕಚ್ಚಿದ್ದು ಇನ್ನಷ್ಟು ಕುಸಿಯುವ ಸ್ಥಿತಿಯಲ್ಲಿದೆ.

1 ರಿಂದ 8ನೇ ತರಗತಿ ವರೆಗೆ ಒಟ್ಟು 93 ಮಕ್ಕಳಿದ್ದಾರೆ. 6 ಶಿಕ್ಷಕರ ಅಗತ್ಯ ವಿದ್ದು 4 ಮಂದಿ ಇದ್ದು ಇನ್ನೆರಡು ಹುದ್ದೆಗಳು ಖಾಲಿಯಾಗಿವೆ. ಅತಿಥಿ ಶಿಕ್ಷಕರನ್ನು ಶ್ರೀ ವಾರಾಹೀ ಯುವಕ ಮಂಡಲ ಮತ್ತು ಮಕ್ಕಳ ಹೆತ್ತವರು ನೇಮಿಸಿದ್ದಾರೆ. ಉದ್ಯಮಿ ಮತ್ತು ಇತರರು ಸೇರಿ ಖರೀದಿಸಿದ ಬಸ್ನಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಹೆತ್ತವರು, ದಾನಿಗಳು ಕೈಜೋಡಿಸಿದ್ದರೂ ಈ ಶಾಲೆಗೆ ಇಲಾಖೆಯ ಸ್ಪಂದನವಿಲ್ಲ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.





























