ಮಂಗಳೂರು: ಮಳಲಿ ಮಸೀದಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷದ್ ಸಲ್ಲಿಸಿದ್ದ ಅರ್ಜಿಯನ್ನು 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಮತ್ತು ವಿಎಚ್ಪಿ ಅರ್ಜಿ ವಜಾ ಮಾಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿಯೇ ಅರ್ಜಿಯ ವಿಚಾರಣೆ ನಡೆಯಲಿದೆ.
ಕೋರ್ಟ್ ಕಮಿಷನರ್ ನೇಮಿಸಿ, ಮಸೀದಿ ಸರ್ವೇ ನಡೆಸಬೇಕು ಎಂದು ವಿಎಚ್ಪಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ವಿಎಚ್ಪಿ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ.
ಮಸೀದಿ ವಿವಾದದ ಬಗ್ಗೆ ಕಳೆದ ಅ.17 ರಂದು ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಇದೆ. ವಿಚಾರಣೆಗಾಗಿ ಕೋರ್ಟ್ ಕಮಿಷನರ್ ನೇಮಿಸಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಕೋರಿದ್ದವು. ಕಳೆದ ಬಾರಿಯ ವಿಚಾರಣೆಯ ವೇಳೆ ನ್ಯಾಯಾಲಯವು ‘ಸದ್ಯದ ಮಟ್ಟಿಗೆ ಮಳಲಿ ಮಸೀದಿ ಕಟ್ಟಡವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಹೇಳಿತ್ತು. ಇಂದು ನೀಡಿದ ತೀರ್ಪಿನಲ್ಲಿ ಈ ಬಗ್ಗೆ ಉಲ್ಲೇಖ ಇರುವ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಆಕೃತಿಯ ಕಟ್ಟಡ ಇದೆ. ಮಸೀದಿ ಸಮುಚ್ಚಯದ ಸರ್ವೇಕ್ಷಣೆಗೆ ಆದೇಶ ಮಾಡಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಮನವಿ ಮಾಡಿದ್ದವು. ಇನ್ನು ವಿರೋಧಿಸಿದ್ದ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಯಕ್ಕೆ ಇಲ್ಲ ಎಂದು ಹೇಳಿದ್ದವು.
ಮಳಲಿ ಮಸೀದಿ ಜಾಗದಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಕ್ಷೇಪಿಸಿದ್ದ ಮಸೀದಿ ಮಂಡಳಿ, ಇಂಥ ಆದೇಶ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿತ್ತು. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯವು ಆಗಸ್ಟ್ 27 ರಂದೇ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅ 17ಕ್ಕೆ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ನಂತರ ಮತ್ತೊಮ್ಮೆ ತೀರ್ಪು ಕಾಯ್ದಿರಿಸಿದ್ದು, ನ 9ಕ್ಕೆ ಕಲಾಪವನ್ನು ಮುಂದೂಡಲಾಗಿತ್ತು. ಇಂದು ತೀರ್ಪು ನೀಡಿರುವ ನ್ಯಾಯಾಲಯವು ವಿಎಚ್ಪಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಮುಂದಿನ ವಿಚಾರಣೆಯನ್ನು ಜ 8ಕ್ಕೆ ಮುಂದೂಡಿದೆ.


























