ವಿಟ್ಲ: ಯುವಕನೋರ್ವನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂಧಿತ ಆರೋಪಿ.

ಬಂಟ್ವಾಳ-ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ (ಸಮಾದ್) (19) ಮೃತ ಯುವಕ.
ಕೊಲೆಯಾದ ಯುವಕ ಸುರಿಬೈಲು ನಿವಾಸಿ ಸಮಾದ್ ನ ಮೃತದೇಹವನ್ನು ಇಂದು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ. ಸ್ಥಳಕ್ಕೆ ಮಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಕೆ.ಎಸ್.ಹೆಗ್ಡೆ ಮೆಡಿಕಲ್ ಆಸ್ಪತ್ರೆಯ ಮಹಾಬಲೇಶ್ವರ ಶೆಟ್ಟಿ ಹಾಗೂ ತಂಡ ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.
ಸಮಾದ್ ಹಾಗೂ ಅದ್ರಾಮ ಇಬ್ಬರು ಸ್ನೇಹಿತರಾಗಿದ್ದು, ಗಾಂಜಾ ವ್ಯಸನಿಗಳಾಗಿದ್ದಾರೆ., ಜೊತೆಗೆ ಇವರೊಳಗೆ ಅನೈತಿಕ ವ್ಯವಹಾರಗಳು ನಡೆಯುತ್ತಿದ್ದವು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಳಿಕ ಸಮಾದ್ ನನ್ನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಗಾಂಜಾ ವ್ಯಸನದ ಜೊತೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಮಾದ್ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೋಗುವುದು ಅದ್ರಾಮನಿಗೆ ಇಷ್ಟವಿರಲಿಲ್ಲ. ಹಾಗಾಗಿ ಹೋಗುವುದಕ್ಕೆ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ.
ಈ ಮಧ್ಯೆ ಅದ್ರಾಮ ಸಮಾದ್ ನನ್ನು ಊರಿಗೆ ಬರುವಂತೆ ಒತ್ತಾಯಿಸಿದ್ದು, ನ.1 ರಂದು ಊರಿಗೆ ಬಂದಿದ್ದ ಸಮಾದ್ ಹಾಗೂ ಅದ್ರಾಮ ಇಬ್ಬರು ಸೇರಿ ಇರಾ ಜನನಿಬಿಡ ಗುಡ್ಡವೊಂದಕ್ಕೆ ಅದ್ರಾಮನ ರಿಕ್ಷಾದಲ್ಲಿ ಹೋಗಿದ್ದರು. ಅಲ್ಲಿ ಅವರು ಏನು ವ್ಯವಹಾರ ನಡೆದಿತ್ತು ಎಂಬುದು ಇನ್ನು ತನಿಖೆಯ ವೇಳೆ ಬಯಲಾಗಬೇಕಿದೆ. ಆದರೆ ಆರೋಪಿ ಪ್ರಾಥಮಿಕ ತನಿಖೆಯ ವೇಳೆ ಹೇಳಿದಂತೆ ಇಬ್ಬರು ಗಾಂಜಾ ಸೇವಿಸಿದ ಬಳಿಕ ಈತ ಬೆಂಗಳೂರಿಗೆ ತೆರಳದಂತೆ ಇವರಿಬ್ಬರ ಮಧ್ಯೆ ಜಗಳ ಆಗಿದೆ. ಬಳಿಕ ಇಬ್ಬರೂ ಗುಡ್ಡೆಯಲ್ಲಿ ಮಲಗಿದ್ದರು. ಆ ಸಂದರ್ಭದಲ್ಲಿ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ಅದ್ರಾಮ ಅವನ ಸಂಬಂಧಿಯೊರ್ವನಿಗೆ ತಿಳಿಸಿದ ಕಾರಣ ಕೊಲೆ ವಿಚಾರ ಬಹಿರಂಗವಾಗಿದೆ. ಅವರೆಗೆ ಸಮಾದ್ ಮನೆಯವರು ಈತ ಬೆಂಗಳೂರಿಗೆ ತೆರಳಿದ್ದಾನೆ ಎಂಬುದೇ ನಂಬಿಕೆಯಾಗಿತ್ತು. ಘಟನಾ ಸ್ಥಳದಲ್ಲಿ ಶವದ ಪರೀಕ್ಷೆ ನಡೆದಿದ್ದು, ಸ್ಥಳದಲ್ಲಿ ಅಡಿಸನಲ್ ಎಸ್.ಪಿ.ಕುಮಾರ್ ಚಂದ್ರ, ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ , ಎಸ್.ಐ.ಹರೀಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.