ತುಳುನಾಡಿನ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಹೆಮ್ಮೆಯ ಸಿನಿಮಾ ಕಾಂತಾರ. ಕಾಂತಾರ ಚಿತ್ರವು ತೆರೆಕಂಡು 50ನೇ ದಿನದತ್ತ ಸಾಗುತ್ತಿದ್ದರೂ ಕಾಂತಾರ ಹವಾ ಮಾತ್ರ ಕಡಿಮೆ ಆಗಿಲ್ಲ. ಕರ್ನಾಟಕ ಮಾತ್ರವಲ್ಲದೇ ವಿಶ್ವದಲ್ಲೆಡೆ ಕಾಂತಾರವನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಇದೀಗ ಉಡುಪಿಯ ಮಣಿಪಾಲ್ ಸ್ಯಾಂಡ್ ಆರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು, ಆಭರಣ ಜ್ಯುವೆಲೆರ್ಸ್‌ನ ಸಹಯೋಗದೊಂದಿಗೆ ಕಾಪು ಕಡಲಕಿನಾರೆಯಲ್ಲಿ ಅದ್ಭುತವಾದ ಮರಳುಶಿಲ್ಪವನ್ನು ರಚಿಸಿದ್ದಾರೆ.

ಮರಳಿನಲ್ಲಿ ಪಂಜುರ್ಲಿ ದೈವದ ಮುಖವನ್ನು ರಚಿಸಿದ್ದು, ಇದರ ಪಕ್ಕದಲ್ಲಿ ಕಾಡನ್ನು ಕೂಡ ನಿರ್ಮಿಸಿದ್ದಾರೆ. ಅಲ್ಲದೇ ಕಾಂತಾರ 50 ಅಂತ ಬರೆದು ಈ ಸಿನಿಮಾದ 50ನೇ ದಿನಕ್ಕೆ ಶುಭ ಕೋರಲಾಗಿದೆ. ಸದ್ಯ ಕಲಾವಿದರ ಕೈಚಳಕಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ.



























