ಪುತ್ತೂರು : ತನ್ನ ಹೆಬ್ಬೆಟ್ಟು ಪೋರ್ಜರಿ ಮಾಡಿ ಲಕ್ಷಾಂತರ ರೂಪಾಯಿ ಪಿಂಚಣಿ ಹಣವನ್ನು ಡ್ರಾ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುರಿಯ ಗ್ರಾಮದ ಸಂಪ್ಯ ಮೂಲೆ ದಿ. ಮೋನ್ ಅವರ ಪತ್ನಿ ಆಸಿಯಮ್ಮ ಯಾನೆ ಅಸ್ಯಮ್ಮ ಅವರು ದೂರು ನೀಡಿದವರು. ತನಗೆ ಬರುತ್ತಿರುವ ಪಿಂಚಣಿ ಹಣವನ್ನು ಕಳೆದ 20 ವರ್ಷದಿಂದ ಬ್ಯಾಂಕ್ ಮ್ಯಾನೇಜರ್ ಸಹಕಾರದೊಂದಿಗೆ ತನ್ನದೇ ಹೆಸರಿನ ಇನ್ನೋರ್ವ ಮಹಿಳೆ ಮತ್ತು ಆಕೆಯ ಸಹೋದರ ಸೇರಿ ಡ್ರಾ ಮಾಡಿ ವಂಚನೆ ಎಸಗಿರುವುದಾಗಿ ಅವರು ಆರೋಪಿಸಿದ್ದಾರೆ.
ಘಟನೆ ವಿವರ : ಅಸಿಯಮ್ಮ ಯಾನೆ ಅಸ್ಯಮ್ಮ ಅವರು ನೀಡಿದ ದೂರಿನಲ್ಲಿ, ನನಗೆ ಸರಕಾರದಿಂದ ಬರುವ ಪಿಂಚಣಿ ಹಣದ ಬತ್ತು ಕೆನರಾ ಬ್ಯಾಂಕ್ ನಲ್ಲಿ ನನ್ನ ಉಳಿತಾಯ ಖಾತೆಗೆ ಜಮೆ ಆಗುತ್ತಿತ್ತು. ಡಿಸೆಂಬರ್ ತಿಂಗಳ ಪಿಂಚಣಿ ಹಣವು ನನ್ನ ಖಾತೆಗೆ ಜಮೆಯಾಗಿರುವ ಕುರಿತು ಖಾತರಿ ಪಡೆಯಲೆಂದು 2020ನೇ ಡಿ.16 ರಂದು ನಾನು ಮತ್ತು ನನ್ನ ಮಗ ಮಹಮ್ಮದ್ ಆಲಿ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಪ್ರಿಂಟ್ ತೆಗೆದು ನೋಡಿದಾಗ 2020ನೇ ನ.25ಕ್ಕೆ 10 ಸಾವಿರ ರೂ. ನನ್ನ ಖಾತೆಯಿಂದ ವಿತ್ ಡ್ರಾ ಆಗಿರುವುದು ಕಂಡು ಬಂದಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ ಬೇರೆಯವರು ಹಣ ಪಡೆದಿರುವ ಕುರಿತು ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಬ್ಯಾಂಕ್ ನ ಮ್ಯಾನೇಜರ್ ಕಲ್ಕೂರ , ಸಂಪ್ಯ ಮೂಲೆ ನಿವಾಸಿ ಆಸಿಯಮ್ಮ ಹಾಗೂ ಅವರ ಸಹೋದರ ಫಕ್ರುದ್ದೀನ್ ಸೇರಿ ನನ್ನ ಖಾತೆಯಿಂದ ರೂ 1 ,38 ,000 ಯನ್ನು ನನ್ನ ಒಪ್ಪಿಗೆ ಇಲ್ಲದೇ ಪಡೆದಿರುವುದು ಕಂಡು ಬಂದಿದೆ . ಈ ಮೂರೂ ಆರೋಪಿಗಳು ಶಾಮೀಲಾಗಿ ನನ್ನ ಹೆಬ್ಬೆಟ್ಟುವನ್ನು ಪೋರ್ಜರಿ ಮಾಡಿ ವಂಚನೆ ಮಾಡಿದ್ದಾರೆ ಎಂದು ಆಸಿಯಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಪುತ್ತೂರು ಕೆನರ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಕಲ್ಕೂರ , ಕುರಿಯ ಗ್ರಾಮದ ಸಂಪ್ಯ ಮೂಲೆ ನಿವಾಸಿ ಇದಿನಬ್ಬ ಎಂಬವರ ಪತ್ನಿ ಆಸಿಯಮ್ಮ ಹಾಗೂ ಆಕೆಯ ಸಹೋದರ ಫಕ್ರುದ್ದೀನ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ ಸೆಕ್ಷನ್ 1860 ( ಯು /ಎಸ್ -406, 409, 417, 419, 420 ,465 468 ಸಹವಾಚ್ಯ 34 ರಂತೆ ಪ್ರಕರಣ ದಾಖಲಾಗಿದೆ.