ಪುತ್ತೂರು : ಡಿಸೆಂಬರ್ 31ರ ರಾತ್ರಿ ಕಳೆದು ಜನವರಿ 1 ಬಂದಾಗ ದಿನ ಬದಲಾವಣೆಯಾಗುತ್ತದೆಯೇ ವಿನಃ ಪ್ರಾಕೃತಿಕ ಬದಲಾವಣೆಗಳಿಲ್ಲ. ಆದರೆ ಭಾರತೀಯ ಕಲ್ಪನೆಯ ಯುಗಾದಿಯಂದು ಪ್ರಕೃತಿಯೇ ತನ್ನಲ್ಲಿ ಬದಲಾವಣೆಗಳನ್ನು ತಂದು ಸಹಜವಾದ ಹೊಸತನ ದತ್ತ ಹೆಜ್ಜೆ ಇಡುತ್ತದೆ. ಆದ್ದರಿಂದಲೇ ಯುಗಾದಿ ನಿಜಾರ್ಥದಲ್ಲಿ ನೂತನ ವರ್ಷಾರಂಭ ಎಂಬ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಯುಗಾದಿ-ಹೊಸ ವರ್ಷಾಚರಣೆ ಹಾಗೂ ‘ಆಮ್ನಾಯಾಃ – ಭಾರತೀಯ ದಿನದರ್ಶಿಕಾ ಗನ್ಧವಹಸದನಂ’ ಎಂಬ ಭಾರತೀಯ ಕಾಲಗಣನೆಯ ಆಧಾರದಲ್ಲಿ ರೂಪಿತವಾಗಿರುವ ಕ್ಯಾಲೆಂಡರ್‍ನ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಯುಗಾದಿ ಪ್ರಯುಕ್ತ ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಕಲ್ಪನೆಯಲ್ಲಿ ಹಬ್ಬ ಎಂದರೆ ಮೋಜು ಮಸ್ತಿಗಾಗಿ ಇರುವ ದಿನವಲ್ಲ. ಇದು ಪ್ರಕೃತಿಗೆ ಪೂರಕವಾಗಿ ಆಚರಿಸುವ, ಪ್ರಕೃತಿಯನ್ನು ಆರಾಧಿಸುವ ದಿನ. ವಸುಂಧರೆಯ ಪೂಜೆಯೊಂದಿಗೆ ನಮ್ಮಲ್ಲಿ ಹೊಸವರ್ಷವನ್ನು ಸ್ವಾಗತಿಸಲಾಗುತ್ತದೆ. ಹಾಗಾಗಿ ನಮ್ಮ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಗೂ ವಿಶೇಷ ಅರ್ಥ ಮತ್ತು ಹಿನ್ನೆಲೆಗಳಿವೆ. ಯುಗಾದಿಯಂದು ಹಂಚುವ ಬೇವು ಬೆಲ್ಲ ಅಥವ ರಾಮನವಮಿಯಂದು ಹಂಚುವ ಪಾನಕಗಳು ನಮ್ಮ ಶಕ್ತಿವರ್ಧಕಗಳು. ಆದರೆ ನಾವಿಂದು ಇಮ್ಯೂನಿಟಿ ಬೂಸ್ಟರ್ ಎಂಬ ಹೆಸರಿನಲ್ಲಿ ಔಷಧವನ್ನು ಸ್ವೀಕರಿಸುತ್ತಿದ್ದೇವೆ. ನಮ್ಮ ಹಿರಿಯರ, ನಮ್ಮ ಆಚರಣೆಗಳ ಬಗೆಗಿನ ತಾತ್ಸಾರ, ಅವಜ್ಞೆಗಳಿಂದಾಗಿ ಅನೇಕ ಉಪಯುಕ್ತ ವಿಚಾರಗಳಿಂದ ನಾವು ವಿಮುಖರಾಗುವಂತಾಗಿದೆ. ಹಾಗಾಗಿ ಮತ್ತೊಮ್ಮೆ ಅಂತಹ ಉತ್ಕಂಷ್ಟ ಸಂಗತಿಗಳೆಡೆಗೆ ನಾವು ದೃಷ್ಟಿ ಹರಿಸಬೇಕಿದೆ ಎಂದು ನುಡಿದರು.
ವಿಜ್ಞಾನವಾದರೂ ಒಂದು ಹಂತದಲ್ಲಿ ಸೋಲಬಹುದು ಆದರೆ ಪ್ರಾಚೀನ ಭಾರತದ ಸಿದ್ಧಾಂತ ಎಂದೂ ಸೋಲದೆಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತೀಯ ದಿನದರ್ಶಿಕೆಯನ್ನು ಲೋಕಾರ್ಪಣೆಗೊಳಿಸಿದ ಜಿ.ಎಲ್.ಆಚಾಯ್ ಜ್ಯುವೆಲ್ಲರ್ಸ್‍ನ ಮಾಲಕ ಬಲರಾಮ ಆಚಾರ್ಯ ಮಾತನಾಡಿ ಅಂಬಿಕಾ ಶಿಕ್ಷಣ ಸಂಸ್ಥೆಗಳು ಅನೇಕ ಹೊಸತನಗಳಿಗೆ ಕಾರಣೀಭೂತವಾಗುತ್ತಿವೆ. ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ಸ್ಥಾಪನೆ, ಪದವಿ ಶಿಕ್ಷಣದಲ್ಲಿ ತತ್ವಶಾಸ್ತ್ರ ಅಳವಡಿಕೆಯೇ ಮೊದಲಾದ ರಾಷ್ಟ್ರಹಿತದ ಕಾರ್ಯಗಳನ್ನು ಅಂಬಿಕಾ ಸಂಸ್ಥೆ ನೆರವೇರಿಸುತ್ತಿರುವುದು ಗಮನಾರ್ಹ. ಭಾರತೀಯ ಕ್ಯಾಲೆಂಡರ್ ಅನ್ನು ಪ್ರತಿಯೊಬ್ಬರೂ ಅನುಸರಿಸುವಂತಾಗಬೇಕು.
ಕ್ಯಾಲೆಂಡರ್‌ನ ಅರ್ಥಸಹಿತ ವಿವರಣೆಯನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲಪಿಸುವ ಕಾರ್ಯ ಆಗಬೇಕು ಎಂದು ನುಡಿದರು. ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಂಸ್ಕಾರ ಹಾಗೂ ಸಂಸ್ಕಂತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ನಿರಂತರ ಪ್ರಯತ್ನವನ್ನು ಅಂಬಿಕಾ ಸಂಸ್ಥೆ ಮಾಡುತ್ತಿದೆ. ಡಿಸೆಂಬರ್ ಕೊನೆಯ ರಾತ್ರಿ ಕುಡಿದು ಕುಪ್ಪಳಿಸುವುದು ನಮ್ಮ ಸಂಸ್ಕಂತಿಯಲ್ಲ. ನಮ್ಮ ಪಾಲಿಗೆ ಯುಗಾದಿಯೇ ಹೊಸವರ್ಷ. ಈ ಸತ್ಯವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಪ್ರವಾಹದ ವಿರುದ್ಧ ಈಜುವ ಕಾರ್ಯವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿವೆ ಎಂದರು.
‘
‘ಆಮ್ನಾಯಾಃ – ಭಾರತೀಯ ದಿನದರ್ಶಿಕಾ ಗನ್ಧವಹಸದನಂ’ ಇದನ್ನು ರೂಪಿಸಿರುವ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ನಾವಿಂದು ಪ್ಲವ ಸಂವತ್ಸರಕ್ಕೆ ಅಡಿಯಿಟ್ಟಿದ್ದೇವೆ. ವಿಪ್ಲವಗಳನ್ನು ಮೀರಿ ಬೆಳೆಯುವುದಕ್ಕೆ ಈ ಸಂವತ್ಸರ ನಮಗೆ ಒದಗಿ ಬರುವಂತಾಗಬೇಕಿದೆ. ನಮ್ಮ ಆಚರಣೆ, ಹಬ್ಬ ಹರಿದಿನಗಳು, ಶುಭ ಕಾರ್ಯಗಳು ಎಲ್ಲವೂ ಭಾರತೀಯ ಕಾಲಗಣನೆ – ಪಂಚಾಂಗದ ಆಧಾರದ ಮೇಲೆಯೇ ನಡೆಯುತ್ತದೆ. ಹೀಗಾಗಿ ನಮ್ಮದೇ ಆದ ಕಾಲಗಣನೆಯ ಕ್ಯಾಲೆಂಡರ್ ನಮಗೆ ಅವಶ್ಯಕ. ನಮ್ಮ ಭವಿಷ್ಯವನ್ನು ನಾವು ತಿಳಿದುಕೊಳ್ಳುವುದೂ ಭಾರತೀಯ ಕಾಲಗಣನೆಯ ಆಧಾರದಲ್ಲಿಯೇ ವಿನಃ ಆಧುನಿಕ ಕ್ಯಾಲೆಂಡರ್ ದಿನಾಂಕಗಳಿಂದಲ್ಲ. ಆದ್ದರಿಂದ ನಮ್ಮದೇ ಆದ ಉತ್ಕಂಷ್ಟ ದಿನದರ್ಶಿಕೆ ನಮಗೆ ಬೇಕಿದೆ ಎಂದರಲ್ಲದೆ ತನ್ನ ಕಾರ್ಯಕ್ಕೆ ಸಹಕರಿಸಿದ ಹೆತ್ತವರನ್ನು, ಗುರುಗಳನ್ನು, ಸಹಕಾರಿಗಳನ್ನು, ಅಂಬಿಕಾ ಸಂಸ್ಥೆಯ ಆಡಳಿತ ವರ್ಗವನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಬಾರತೀಯ ದಿನದರ್ಶಿಕೆಯನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು. ನಮ್ಮತನವನ್ನು ಸಮಾಜದಲ್ಲಿ ಪ್ರಚಾರಕ್ಕೆ ತರುವುದು ನಮ್ಮ ಜವಾಬ್ಧಾರಿ ಎಂದು ಅಭಿಪ್ರಾಯಪಟ್ಟರು. ಬೇವು ಬೆಲ್ಲವನ್ನು ವಿತರಿಸುವುದರ ಮೂಲಕ ಯುಗಾದಿ ಹೊಸವರ್ಷವನ್ನು ಆಚರಿಸಲಾಯಿತು.