ದೆಹಲಿಯಲ್ಲಿ ಶ್ರದ್ದಾ ವಾಕರ್ ಭೀಕರ ಹತ್ಯೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಲೆಗೈದು ಮೃತದೇಹದೊಂದಿಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಘಟನೆ ನಡೆದಿದೆ.
ಶಿಲ್ಪಾ ಝರಿಯಾ ಕೊಲೆಯಾದಾಕೆ. ಆಕೆಯನ್ನು ಹತ್ಯೆಗೈದ ಅಭಿಜಿತ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಘಟನೆ ವಾರದ ಹಿಂದೆ ನಡೆದಿದೆ ಎನ್ನಲಾಗಿದ್ದು, ಆರೋಪಿಯು ಜಬಲ್‌ಪುರದ ಮೇಖ್ಲಾ ರೆಸಾರ್ಟ್‌ನಲ್ಲಿ ಯುವತಿ ಶಿಲ್ಪಾಳ ಕತ್ತು ಸೀಳಿ ಹಾಸಿಗೆ ಮೇಲೆ ಇರುವ ಮೃತದೇಹವನ್ನು ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಬಳಿಕ ನಂಬಿಕೆ ದ್ರೋಹ ಮಾಡಿದರೆ ಇದೇ ರೀತಿ ಆಗುತ್ತದೆ ಎಂಬುದಾಗಿ ವೀಡಿಯೋದಲ್ಲಿ ಹೇಳಿದ್ದು, ರಕ್ತದ ಮಡುವಿನಲ್ಲಿದ್ದ ಮೃತದೇಹವನ್ನು ತೋರಿಸಿದ್ದಾನೆ.
ಅಭಿಜಿತ್‌ನ ಗೆಳೆಯ, ಪಾಟ್ನಾದಲ್ಲಿ ವ್ಯಾಪಾರಿಯಾಗಿರುವ ಜಿತೇಂದ್ರ ಎಂಬಾತನೊಂದಿಗೆ ಶಿಲ್ಪಾ ಸಂಬಂಧ ಹೊಂದಿದ್ದಳು. ಅಲ್ಲದೆ ಆತನಿಂದ 12 ಲಕ್ಷ ರೂ. ಪಡೆದುಕೊಂಡು ಜಬಲ್‌ಪುರಕ್ಕೆ ಬಂದಿದ್ದಳು. ಈ ಬಗ್ಗೆ ಜಿತೇಂದ್ರನಿಂದ ತಿಳಿದುಕೊಂಡ ಅಭಿಜಿತ್ ಸೀದಾ ಜಬಲ್‌ಪುರಕ್ಕೆ ಬಂದು ಆಕೆಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.