ಪುತ್ತೂರು ಮೂಲದ ವೈದ್ಯರಾದ, ಡಾ. ಕೃಷ್ಣಮೂರ್ತಿ ಯವರ ಅನುಮಾನಾಸ್ಪದ ಸಾವಿನ, ಸಮಗ್ರ ತನಿಖೆಯನ್ನು ನಡೆಸುವಂತೆ, ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಆಗ್ರಹ ವ್ಯಕ್ತಪಡಿಸಿದೆ.
ಪುತ್ತೂರಿನಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ, ಜನಪ್ರಿಯ ವೈದ್ಯರಿಬ್ಬರ ಸಹೋದರರಾದ ಡಾ. ಕೃಷ್ಣಮೂರ್ತಿಯವರು, ಕರ್ನಾಟಕ- ಕೇರಳ ಗಡಿನಾಡು ಪ್ರದೇಶವಾದ ಬದಿಯಡ್ಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರ ಮೃತದೇಹವು ಕುಂದಾಪುರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ, ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇವರ ಸಾವಿನ ಕುರಿತು ಹಲವಾರು ಸಂಶಯಗಳನ್ನು ಅವರ ಕುಟುಂಬಸ್ಥರು ಹೊರ ಹಾಕುತ್ತಿದ್ದಾರೆ. ಈ ಪ್ರಕರಣವು ಕರ್ನಾಟಕ -ಕೇರಳ ಪ್ರದೇಶಕ್ಕೆ ಒಳಪಟ್ಟ ಪ್ರಕರಣವಾದುದರಿಂದ, ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಬೇಕೆಂದು ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸರಕಾರವನ್ನು ಆಗ್ರಹಿಸಿದ್ದಾರೆ.