ಪಡುಬಿದ್ರಿ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ರಿಕ್ಷಾ ನಿಲ್ದಾಣ ಬಳಿ ಬುಧವಾರ ಮಧ್ಯಾಹ್ನದ ವೇಳೆ ಟಿಪ್ಪರ್‌ನ ಹಿಂಬದಿ ಚಕ್ರವು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಪಡುಬಿದ್ರಿ ಕಂಚಿನಡ್ಕದ ಯುವತಿ ಅಯಿಷಾ ನಿಹಾಲಾ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾಳೆ.
ಬೈಕ್ ಚಲಾಯಿಸುತ್ತಿದ್ದ ಯುವಕ ಬೆಳಪುವಿನ ಮಹಮ್ಮದ್ ಷರೀಫ್ ಗಾಯಗೊಂಡು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರೀರ್ವರ ವಿವಾಹ ನಿಶ್ಚಿತಾರ್ಥವಾಗಿದ್ದು ಜನವರಿಯಲ್ಲಿ ಮದುವೆ ನಡೆಯಲಿತ್ತೆಂದು ತಿಳಿದು ಬಂದಿದೆ.
ಯುವಕ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಮಂಗಳವಾರವಷ್ಟೇ ಊರಿಗೆ ಬಂದಿದ್ದ. ಆತನೊಂದಿಗೆ ವಿವಾಹವಾಗಲಿದ್ದ ಯುವತಿಯು ಉಡುಪಿಗೆ ತೆರಳಿ ಡ್ರೆಸ್ ಖರೀದಿಸಿ ಪಡುಬಿದ್ರಿಯತ್ತ ವಾಪಸಾಗುತ್ತಿದ್ದರು. ಅವರಿಬ್ಬರು ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಉಚ್ಚಿಲದಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಈ ಅಪಘಾತವು ಸಂಭವಿಸಿದೆ.
ತೀವ್ರ ಗಾಯಗೊಂಡ ಯುವತಿಯನ್ನು ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನಿಹಾಲಾ ತಂದೆ ಮೇಸ್ತ್ರಿ ವೃತ್ತಿ ಯವರಾಗಿದ್ದು ಅವರ ಪುತ್ರಿಯರೀರ್ವರ ವಿವಾಹ ನಿಶ್ಚಯವಾಗಿತ್ತು. ಇದೀಗ ಕಿರಿಯ ಪುತ್ರಿಯ ಸಾವಿನಿಂದಾಗಿ ಮನೆಮಂದಿ ಕಂಗಾಲಾಗಿದ್ದಾರೆ. ಮೃತ ನಿಹಾಲಾ ತಂದೆ, ತಾಯಿ, ಅಕ್ಕ ಹಾಗೂ ಸಹೋದರರೀರ್ವರನ್ನು ಅಗಲಿದ್ದಾರೆ.