ಬೆಂಗಳೂರು: ಪ್ರೇಯಸಿ ಜೊತೆ ಏಕಾಂತದಲ್ಲಿದ್ದ ಸಂದರ್ಭದಲ್ಲಿ ಪತಿ ಏಕಾಏಕಿ ಎಂಟ್ರಿ ಕೊಡುತ್ತಿದ್ದಂತೆ, ತಪ್ಪಿಸಿಕೊಳ್ಳುವ ಭರದಲ್ಲಿ ಪ್ರಿಯಕರ ಸಾರ್ವಜನಿಕರಿಗೆ ನಿಷೇಧ ಇರೋ ಹೆಚ್.ಎ.ಎಲ್. ವಿಮಾನ ನಿಲ್ದಾಣದ ಗೋಡೆ ಹಾರಿ ಪೊಲೀಸರ ಅತಿಥಿಯಾಗಿದ್ದಾನೆ.
ಅಸ್ಸಾಂ ಮೂಲದ ಮುಕುಂದ್ ಕೌಂದ್(36) ಬಂಧಿತ ಆರೋಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ಹಿಂದಿನ ದಿನ ಈ ಘಟನೆ ನಡೆದಿದೆ.
ಬಂಧಿತ ಆರೋಪಿ ಮುಕುಂದ್ ಕೌಂದ್, ಹೆಚ್. ಎ.ಎಲ್.ನ ಖಾಸಗಿ ಕಂಪನಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ, ಹೆಚ್. ಎ.ಎಲ್. ಸಮೀಪದ ಯಮಲೂರಿನ ನಿವಾಸದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆರೋಪಿ ಮುಕುಂದ್ ಅಸ್ಸಾಂನಿಂದ ನ.09 ರಂದು ಮನೆಗೆ ಆಗಮಿಸಿದ್ದನಂತೆ. ಆದರೆ ಪ್ರೇಯಸಿಯೊಂದಿಗೆ ಏಕಾಂತದಲ್ಲಿದ್ದ ಸಮಯದಲ್ಲಿ ಆಕೆಯ ಗಂಡ ಅನಿರೀಕ್ಷಿತವಾಗಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಆರೋಪಿ, ಅಲ್ಲಿ ಜಗಳ ಮಾಡಿಕೊಂಡು ಪರಾರಿಯಾಗಿ ತಪ್ಪಿಸಿಕೊಳ್ಳುವ ಭರದಲ್ಲಿ ಹೆಚ್.ಎ.ಎಲ್. ವಿಮಾನ ನಿಲ್ದಾಣದ ಗೋಡೆ ಜಿಗಿದು ಅಡಗಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಆರೋಪಿಯನ್ನು ಬಂಧಿಸಿದ ಭದ್ರತಾ ಸಿಬ್ಬಂದಿಗೆ ಮೊದಲು ಆತ ಕಳ್ಳ ಇರಬಹುದು ಎಂಬ ಶಂಕೆ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ವಿಚಾರಣೆ ನಡೆಸಿದ
ಸಂದರ್ಭದಲ್ಲಿ ಅಸಲಿಯತ್ತು ಗೊತ್ತಾಗಿದೆ. ಘಟನೆ ಸಂಬಂಧ ಹೆಚ್‌ಎಎಲ್ ವಿಮಾನ ನಿಲ್ದಾಣದ ಸೆಕ್ಯೂರಿಟಿ ಇನ್ಸ್ಪೆಕ್ಟರ್, ಮುಕುಂದ್ ವಿರುದ್ಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿರುವ ಮುನ್ನ ಘಟನೆ ನಡೆದಿದ್ದರಿಂದ ಇದನ್ನು ಭದ್ರತಾ ಲೋಪ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರೋ ವೈಟ್‌ಫೀಲ್ಡ್ ಡಿಸಿಪಿ ಗಿರೀಶ್,
ಪ್ರಧಾನಿಗಳ ಭದ್ರತೆಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ತಿಳಿಸಿದ್ದಾರೆ.