ಮಂಗಳೂರು: ಕೆ.ಎಸ್. ರಾವ್ ರಸ್ತೆಯ ನಲಪಾಡ್ ಅಪ್ಸರಾ ಚೇಂಬರ್ಸ್ ಕಟ್ಟಡದ ನೆಲ ಮಹಡಿಯಲ್ಲಿರುವ ಹೂವಿನ ಅಂಗಡಿಯಿಂದ 9 ಲಕ್ಷ ರೂ. ಮತ್ತು ಸಿಸಿ ಕ್ಯಾಮರಾ ಡಿವಿಆರ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಂಕನಾಡಿ ನಿವಾಸಿ ಉಮರಬ್ಬ ಎಂಬವರಿಗೆ ಸೇರಿದ ಹೂವಿನ ಅಂಗಡಿ ಇದಾಗಿದ್ದು, ಕಳೆದ 12 ವರ್ಷಗಳಿಂದ ಹೋಲ್‌ಸೇಲ್ ಹೂವಿನ ವ್ಯಾಪಾರ ಮಾಡಿಕೊಂಡಿದ್ದರು.

ಉಮರಬ್ಬ ಅವರು ಪ್ರತಿನಿತ್ಯ ವ್ಯಾಪಾರದ ಹಣ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಬುಧವಾರ ಹೂವಿನ ರೈತರಿಗೆ ಕೊಡಬೇಕಾದ ಸುಮಾರು 9 ಲಕ್ಷ ರೂ. ಹಣವನ್ನು ಅಂಗಡಿಯ ಟೇಬಲ್‌ನ ಡ್ರಾವರ್‌ನಲ್ಲಿ ಇಟ್ಟು ಲಾಕ್ ಮಾಡಿ ಸಂಜೆ 6 ಗಂಟೆಗೆ ಆಂಗಡಿ ಮುಚ್ಚಿ ತೆರೆಳಿದ್ದರು.
ಆದರೆ ಗುರುವಾರ ಬೆಳಗ್ಗೆ 6 ಗಂಟೆಗೆ ಅವರ ಮಗ ರಿಯಾಜ್ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಮುಖ್ಯ ದ್ವಾರದ ಶಟರ್‌ನ ಸೆಂಟರ್ ಲಾಕ್ ಮುರಿದಿರುವುದು ಕಂಡುಬಂದಿದ್ದು, ಕೂಡಲೇ ಅವರು ಉಮರಬ್ಬ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಬಂದು ಅಂಗಡಿಯ ಶಟರ್ ಬಾಗಿಲನ್ನು ಮೇಲಕ್ಕೆತ್ತಿ ಒಳಗಡೆ ನೋಡಿದಾಗ ಟೇಬಲ್‌ನ ಡ್ರಾವರ್ ಲಾಕ್ ಮುರಿದು ಅದರಲ್ಲಿದ್ದ 9 ಲಕ್ಷ ರೂ. ಹಾಗೂ ಅಂಗಡಿಯೊಳಗಡೆ ಅಳವಡಿಸಿದ್ದ ಸಿಸಿ ಕ್ಯಾಮರಾ ಡಿವಿಆರ್ ಮತ್ತು ಮಾನಿಟರ್ ಇರಿಸಿದ ಬಾಕ್ಸ್ ಅನ್ನು ತೆರೆದು ಸುಮಾರು 10 ಸಾವಿರ ರೂ. ಮೌಲ್ಯದ ಡಿವಿಆರ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.