ಮಂಜೇಶ್ವರ : ಮದ್ರಸಾದಿಂದ ಹೊರ ಬರುತ್ತಿದ್ದ 9ರ ಹರೆಯದ ಬಾಲಕಿಯನ್ನು ಮೇಲಕ್ಕೆತ್ತಿ ನೆಲಕ್ಕೆಸೆದ ಆರೋಪಿ ಕುಂಜತ್ತೂರು ಉದ್ಯಾವರದ ಅಬೂಬಕ್ಕರ್ ಸಿದ್ದೀಕ್ (30) ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆ ಯತ್ನ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ಗಾಯಗೊಂಡ ಬಾಲಕಿಯ ಹೇಳಿಕೆಯನ್ನು ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ(2) ದಾಖಲಿಸಿಕೊಳ್ಳಲಿದೆ. ನ. 17ರಂದು ಬೆಳಗ್ಗೆ ಮದ್ರಸಾದಿಂದ ಹೊರಬರುತ್ತಿದ್ದ ಬಾಲಕಿಯನ್ನು ಆರೋಪಿ ವಿನಾಕಾರಣ ಮೇಲಕ್ಕೆತ್ತಿ ನೆಲಕ್ಕೆ ಎಸೆದಿದ್ದ. ಇದರ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದೆ.
ನೆಲಕ್ಕೆ ಬಿದ್ದ ಬಾಲಕಿ ಅಲ್ಲಿಂದ ಎದ್ದೇಳಲು ಪ್ರಯತ್ನಿಸಿದರೂ, ಆಗದೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆದಾದ ಬಳಿಕ ಆಕೆ ಎದ್ದು ನೇರವಾಗಿ ಮನೆಗೆ ಹೋಗಿ ನಡೆದ ವಿಷಯವನ್ನು ಮನೆಯವರಲ್ಲಿ ತಿಳಿಸಿದ್ದಳು. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಾಲಕಿಯನ್ನು ಮೇಲಕ್ಕೆತ್ತಿ ನೆಲಕ್ಕೆ ಎಸೆದಿರುವುದಾದರೂ ಯಾತಕ್ಕಾಗಿ ಎನ್ನುವುದು ಈ ತನಕ ಸ್ಪಷ್ಟಗೊಂಡಿಲ್ಲ. ಅದನ್ನು ಭೇದಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ಬಾಲಕಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
























