ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆ ವೇಳೆ ಆಟೋದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು ಬೋಲ್ಟ್, ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿದೆ. ಸಿಕ್ಕ ವಸ್ತುಗಳನ್ನು ಎಫ್.ಎಸ್.ಎಲ್ ತಂಡ ಪರೀಕ್ಷೆಗೊಳಪಡಿಸಿದೆ.
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟವಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಸ್ಪೋಟಗೊಂಡ ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು ಬೋಲ್ಟ್, ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿದೆ. ಲಘು ತೀವ್ರತೆಯ ಸ್ಫೋಟಕ ಬಳಸಿರುವ ಶಂಕೆ ವ್ಯಕ್ತವಾಗಿದ್ದು ಈಗಾಗಲೇ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು ಎಫ್.ಎಸ್.ಎಲ್ ತಂಡ ಪರೀಕ್ಷೆಗೊಳಪಡಿಸಿವೆ.

ಇನ್ನು ಆಟೋದಲ್ಲಿದ್ದ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಿದೆ. ಈತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಹತ್ತಿದ್ದ. ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದು ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯವಾಗಿದೆ. ಕೈ, ಎದೆ, ಮುಖದ ಭಾಗಕ್ಕೆ ಗಾಯವಾಗಿದ್ದು ಸದ್ಯ ಗಂಭೀರ ಸ್ಥಿತಿಯಲ್ಲಿರುವ ಪ್ರಯಾಣಿಕನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಕಾರ್ಮಿಕ ಉತ್ತರಪ್ರದೇಶ ನಿವಾಸಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನ ಬಾಕ್ಸ್, ಬ್ಯಾಗ್ನಿಂದಲೇ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ.
ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆದ್ರೆ ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಈತ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು ಅಣ್ಣ ಬಾಬುರಾವ್ ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದ. ಆ ನಂಬರ್ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ, ಆತ ತನ್ನ ರೂಮ್ ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ ಎಂದಿದ್ದಾನೆ. ಆತನ ಬಗ್ಗೆ ಬೇರೆ ಗೊತ್ತಿಲ್ಲ ಎಂದಿದ್ದಾನೆ. ಹೀಗಾಗಿ ಗಾಯಗೊಂಡ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಾಗಿದೆ.
ಮಂಗಳೂರು ಆಟೋ ಸ್ಪೋಟದ ತನಿಖೆಗೆ ಎನ್.ಐ.ಎ ಟೀಂ..!!??
ಇಂದು ಬೆಂಗಳೂರಿನಿಂದ ಮಂಗಳೂರಿಗೆ ಎನ್.ಐ.ಎ ತಂಡ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ನಿನ್ನೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಪೋಟವಾಗಿದ್ದು ಇದನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡವೂ ಮಂಗಳೂರಿಗೆ ಬರಲಿದೆ. ಮಂಗಳೂರು ಪೊಲೀಸರು ಇಡೀ ಘಟನೆ ಬಗ್ಗೆ ಕೂಲಂಕುಶ ತನಿಖೆಗೆ ಇಳಿದಿದ್ದಾರೆ. ಎನ್.ಐ.ಎ ಉಗ್ರ ಕೃತ್ಯದ ಆಯಾಮದಲ್ಲಿ ತನಿಖೆ ನಡೆಸಲಿದೆ.
ಇನ್ನು ಈ ಸಂಬಂಧ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದೇನೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗ್ತಿದೆ. ಮಂಗಳೂರಿನಲ್ಲಿ ಸೀನಿಯರ್ಸ್ ಆಫೀಸರ್ಸ್ ಇದ್ದಾರೆ. ಕೇಸ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗ್ತಿದೆ ಎಂದರು.
ದಾಳಿಯ ಸಂಚು ದೃಢ, ಭಯೋತ್ಪಾದನೆ ಕೃತ್ಯ,- ಡಿಜಿಪಿ
ಆಟೋದಲ್ಲಿ ಕುಕ್ಕರ್ ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಭಯೋತ್ಪಾದನಾ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಅವರು, ಉದ್ದೇಶಪೂರ್ವಕವಾಗಿ ಸಾವು ನೋವು ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಇದಾಗಿದ್ದು ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಕರ್ನಾಟಕ ಪೊಲೀಸ್ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸುತ್ತಿದೆ ಎಂದಿದ್ದಾರೆ.
ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದೆ. ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.


























