ಮಂಗಳೂರು: ಆಟೋ ರಿಕ್ಷಾ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ನಿಷೇಧಿತ ಪಿ.ಎಫ್.ಐ ಸಂಘಟನೆ ಮುಖಂಡನೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಿಎಫ್ಐ ಮುಖಂಡ ಇಜಾಜ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವಶಕ್ಕೆ ಪಡೆದಿರುವ ಪಿಎಫ್ಐ ಮುಖಂಡ ಇಜಾಜ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಎಂದು ತಿಳಿದು ಬಂದಿದೆ.
ಪಿಎಫ್ಐ ನಿಷೇಧವಾದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್ಐ ಮುಖಂಡರನ್ನು ಬಂಧಿಸಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಈತ 10 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಮಧ್ಯೆ ಇಂದು ದುಬೈಗೆ ಹಾರಲು ಇಜಾಜ್ ಪ್ಲಾನ್ ಮಾಡಿಕೊಂಡಿದ್ದ ಎಂದು ವರದಿಯಾಗಿದೆ..
























