ಮಂಗಳೂರು: ಕಳೆದೆರಡು ದಿನಗಳ ಹಿಂದೆ ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಇಂದು ಬಿಜೈನಲ್ಲಿರುವ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‍ವೊಂದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಬಿಜೈನಲ್ಲಿರುವ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಾರಸುದಾರರಿಲ್ಲದ ಬ್ಯಾಗ್ ಒಂದು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿತು.
ಈ ವೇಳೆ ಬ್ಯಾಗ್‍ನಲ್ಲಿ ಯಾವುದೇ ಸ್ಫೋಟಕ ವಸ್ತುಗಳ ಪತ್ತೆಯಾಗಲಿಲ್ಲ. ಬಳಿಕ ಬ್ಯಾಗ್‍ನ ವಾರಸುದಾರರು ಪತ್ತೆಯಾಗಿದ್ದು, ಬಸ್ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲಿ ಇಟ್ಟು ಹೋಗಿದ್ದರು ಎಂದು ತಿಳಿದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಬಸ್ ನಿಲ್ದಾಣದಲ್ಲಿದ್ದವರು ನಿರಾಳರಾದರು.


























