ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆ ಸಾವನ್ನಪ್ಪಿದ್ದು, ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ,’ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಗೋಪಾಲಸ್ವಾಮಿ ಹುಣಸೂರಿನ ಮತ್ತಿಗೋಡು ಶಿಬಿರದಲ್ಲಿ ಕಾಡಾನೆ ಜೊತೆ ಕಾದಾಡಿ ಸಾವನ್ನಪ್ಪಿರುವ ಸುದ್ದಿ ತಿಳಿದು ಬೇಸರವಾಯಿತು. ಗಜರಾಜನ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.

39 ವರ್ಷದ ಗೋಪಾಲಸ್ವಾಮಿ ಕಾಡಾನೆ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ ಹಾಗೂ ಪಟಾಕಿ ಶಬ್ದದಿಂದ ವಿಚಲಿತನಾಗಿತ್ತು. ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆದಿತ್ತು. ಭವಿಷ್ಯದಲ್ಲಿ ಮೈಸೂರು ದಸರಾ ಅಂಬಾರಿ ಹೊರುವ ಸಾಮರ್ಥ್ಯವಿರೋ ಆನೆ ಎಂದೇ ಗುರುತಿಸಿಕೊಂಡಿತ್ತು.
ನಿನ್ನೆ ಹುಣಸೂರಿನ ಮತ್ತಿಗೋಡಿನ ಸಾಕಾನೆ ಶಿಬಿರದಲ್ಲಿ ಪಳಗಿಸಲು ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆ ಜೊತೆಗಿನ ಕಾದಾಟದಲ್ಲಿ ಗೋಪಾಲಸ್ವಾಮಿ ಆನೆ ಮೃತಪಟ್ಟಿತ್ತು.


























