ಮಂಗಳೂರು: ಕತಾರ್ ದೇಶದಲ್ಲಿ ನಡೆಯುತ್ತಿರುವ ‘ಫಿಫಾ ವಿಶ್ವಕಪ್’ ಮೆಡಿಕಲ್ ತಂಡದೊಂದಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್. ದರ್ಖಾಸು ಎಂಬವರು ಕತಾರಿನ ವಿಶ್ವಕಪ್ ಮೆಡಿಕಲ್ ಟೀಮ್ ನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು.
ಈ ಮೂಲಕ ಅವರು ವಿಶ್ವಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸೂರಂಡೆ ನಿವಾಸಿಗಳಾದ ನಾರಾಯಣ ಪೂಜಾರಿ ಮತ್ತು ಶ್ರೀಮತಿ ದಂಪತಿಗಳ ಪುತ್ರಿಯಾದ ಪ್ರತಿಭಾ ಅವರು ವಾಮದಪದವು ಸಮೀಪದ ಕುಡಂಬೆಟ್ಟು ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರನ್ನು ವಿವಾಹವಾಗಿದ್ದು, ಸಂಸಾರ ಸಹಿತ ಕಳೆದ ಕೆಲವು ವರ್ಷಗಳಿಂದ ಕತಾರಿನಲ್ಲಿ ನೆಲೆಸಿದ್ದಾರೆ.

ಪ್ರತಿಭಾ ಅವರು ಕತಾರಿನ ಹಾಮದ್ ಮೆಡಿಕಲ್ ಕಾರ್ಪೋರೇಶನ್ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ಸಹಿತ ಇತರ ಸಂದರ್ಭದಲ್ಲಿನ ಇವರ ವಿಶೇಷ ಸೇವೆಯನ್ನು ಗುರುತಿಸಿ ಈಗಾಗಲೇ ಗೌರವಿಸಲಾಗಿತ್ತು.
ಇದೀಗ ಇವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕತಾರ್ ಫಿಫಾ ವಿಶ್ವಕಪ್ ಮೆಡಿಕಲ್ ಟೀಮ್ ನಲ್ಲಿ ನರ್ಸಿಂಗ್ ಇನ್ಚಾರ್ಜ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಲಾಗಿದೆ.