ಉಡುಪಿ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ನಲ್ಲಿ ನಡೆದಿದೆ.
ಉದ್ಯಾವರ ಬೊಳ್ಜೆಯ ಸುಶಿಕ್ಷಿತ್ (20) ಮೃತ ಬೈಕ್ ಸವಾರ.

ಮೃತ ಯುವಕ ಸುಶಿಕ್ಷಿತ್ ತನ್ನ ಗೆಳೆಯ ಜಯದೀಪ್ ಜೊತೆಗೆ ಕ್ಯಾಟರಿಂಗ್ ಕೆಲಸಕ್ಕೆಂದು ಹೋಗುತ್ತಿದ್ದ. ಈ ವೇಳೆ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಸ್ತೆಗೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಯುವಕ ಒದ್ದಾಡುತ್ತಿದ್ದ. ಅಲ್ಲೇ ಇದ್ದ ಇಬ್ಬರು ಸ್ನೇಹಿತರು, ಗೆಳೆಯನನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ಜನರಲ್ಲಿ ಗೋಗರೆದಿದ್ದಾರೆ. ಆದರೆ ಮಾನವೀಯತೆ ಮರೆತ ಸಾರ್ವಜನಿಕರು ದೂರವೇ ನಿಂತು ಎಲ್ಲವನ್ನು ನೋಡಿ ಸುಮ್ಮನಾಗಿದ್ದಾರೆ. ಕೊನೆಗೆ ಆಟೋದಲ್ಲಿ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸುಶಿಕ್ಷಿತ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೆಳೆಯನ್ನು ಹಿಡಿದು ಆಕ್ರಂದನ ಹೊರ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..


























